ಕಾಸರಗೋಡು: ಮನೆಯೊಂದರಲ್ಲಿ ನಿದ್ರಿಸುತ್ತಿದ್ದ ಹತ್ತರ ಹರೆಯದ ಬಾಲಕಿಯನ್ನು ಅಪಹರಿಸಿ ಕೊಂಡೊಯ್ದು ಲೈಂಗಿಕ ದೌರ್ಜನ್ಯಗೈದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾಞಂಗಾಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಆಂಧ್ರಪ್ರದೇಶದಿಂದ ಪ್ರತ್ಯೇಕ ತನಿಖಾ ತಂಡ ಆರೋಪಿಯನ್ನು ಬಂಧಿಸಿದ್ದಾರೆ.
ಕರ್ನಾಟಕದ ಕೊಡಗು ನಾಪೋಕ್ಲು ನಿವಾಸಿ ಸಲೀಂ (39) ಬಂಧಿತ ಆರೋಪಿ. ಮೇ ತಿಂಗಳ 15ರಂದು ಘಟನೆ ನಡೆದಿತ್ತು. ಅಂದು ಮುಂಜಾನೆ 2.30ರ ವೇಳೆ ಮನೆಗೆ ನುಗ್ಗಿದ ಆರೋಪಿ ಬಾಲಕಿಯನ್ನು 500 ಮೀಟರ್ ದೂರದ ಬಯಲಿಗೆ ಕೊಂಡೊಯ್ದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯಗೈದಿದ್ದನು.
ಬಳಿಕ ಆಕೆಯ ಬೆಂಡೋಲೆಗಳನ್ನು ಅಪಹರಿಸಿ ಆರೋಪಿ ಪರಾರಿಯಾಗಿದ್ದನು. ಆರೋಪಿಯ ಕೈಯಿಂದ ಪಾರಾದ ಬಾಲಕಿ ಸಮೀಪದ ಮನೆಗೆ ತಲುಪಿ ವಿಷಯ ತಿಳಿದಾಗಲೇ ಘಟನೆ ಬಹಿರಂಗಗೊಂಡಿತ್ತು. ಆತನ ಓಟಾಟ ನಡೆಸಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದನ್ನು ಆಧರಿಸಿಕೊಂಡು ಆತನ ಬಂಧನಕ್ಕೆ ಬಲೆ ಬೀಸಿದ್ದರು.
ಇದರಂತೆ ಕೇಸು ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದರು. ಬಳಿಕ ಆರೋಪಿಯ ಪತ್ತೆಗಾಗಿ ಪ್ರತ್ಯೇಕ ತನಿಖಾ ತಂಡವನ್ನು ನೇಮಿಸಲಾಗಿತ್ತು. ಈ ತಂಡ ಕೊಡಗು ಸಹಿತ ವಿವಿಧೆಡೆಗಳಿಗೆ ತನಿಖೆ ವಿಸ್ತರಿಸಿತ್ತು. ಇದೀಗ ಆರೋಪಿಯನ್ನು ಆಂಧ್ರಪ್ರದೇಶದಿಂದ ಬಂಧಿಸುವಲ್ಲಿ ತನಿಖಾ ತಂಡ ಯಶಸ್ವಿಯಾಗಿದೆ.