ಮಂಗಳೂರು: ಲೇಖಕ ಮುದ್ದು ಮೂಡುಬೆಳ್ಳೆ ಅವರ ‘ತುಳುನಾಡಿನ ಜನಪದ ವಾದ್ಯಗಳು ಮತ್ತು ಪಾರಂಪರಿಕ ವೃತ್ತಿಗಳು’ ಕೃತಿಯನ್ನು ಜಾನಪದ ವಿದ್ವಾಂಸ ಡಾ.ಗಣನಾಥ ಶೆಟ್ಟಿ ಎಕ್ಕಾರು ಲೋಕಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಅವರು, ‘ತುಳುನಾಡಿನ ದೈವಾರಾಧನೆ, ಸುಗ್ಗಿ ಕುಣೀತ, ಚೆನ್ನ ಕುಣಿತ, ಕಂಗೀಲುವಿನಂತಹ ಎಲ್ಲ ಆಚರಣೆಗಳಲ್ಲೂ ಚರ್ಮ ವಾದ್ಯ, ಗಾಳಿ ವಾದ್ಯ, ಲೋಹ ವಾದ್ಯಗಳ ಬಳಸಲಾಗುತ್ತದೆ.
ಇಲ್ಲಿನ ಜನಪದ ವಾದ್ಯಗಳು ಮತ್ತು ಇಲ್ಲಿನ ಸಂಸ್ಕೃತಿ ನಡುವೆ ಸೂಕ್ಷ್ಮ ಸಂಬಂಧವಿದೆ. ಇಂತಹ ಸೂಕ್ಷ್ಮ ವಿಷಯಗಳ ಅಧ್ಯಯನ ನಡೆಸಿರುವ ಮುದ್ದು ಮೂಡುಬೆಳ್ಳೆ ಅವರು ಅದನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಇವುಗಳ ಬಗ್ಗೆ ಇನ್ನಷ್ಟು ಆಳವಾದ ಅಧ್ಯಯನದ ಅಗತ್ಯ ಇದೆ’ ಎಂದರು.
ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆ ಜ್ಯೋತಿ ಚೇಳ್ಯಾರು ಮಾತನಾಡಿ, ‘1990ರ ದಶಕದಲ್ಲಿ ನಡೆಸಿದ್ದ ಕ್ಷೇತ್ರ ಕಾರ್ಯದ ಆಕರಗಳನ್ನು ಮತ್ತಷ್ಟು ಪರಿಷ್ಕರಿಸಿ ಮುದ್ದು ಮೂಡುಬೆಳ್ಳೆ ಮಹತ್ವದ ಕೃತಿಯನ್ನು ಪ್ರಕಟಿಸಿದ್ದಾರೆ. ತುಳುನಾಡಿನ ಪಾರಂಪರಿಕ ಸಮುದಾಯಗಳ ಕುಲ ಮೂಲ ಹಾಗೂ ಕುಲಶಾಸ್ತ್ರದ ಅಧ್ಯಯನಗಳು ನಡೆದಿವೆ. ಇಲ್ಲಿನ ಜಾತಿಗಳು, ಅವುಗಳ ಮೂಲಗಳ ಬಗ್ಗೆ ಅಧ್ಯಯನದಲ್ಲಿ ತೊಡಗುವವರು ಈ ಕೃತಿಯನ್ನು ಆಕರವಾಗಿ ಬಳಸಬಹುದು’ ಎಂದರು.
ಲೇಖಕ ಮುದ್ದು ಮೂಡುಬೆಳ್ಳೆ, ಯುವ ವಾಹಿನಿಯ ಪಿ.ಸಾಧು ಪೂಜಾರಿ ಹಾಗೂ ಆಕೃತಿ ಆಶಯ ಪ್ರಕಾಶನದ ವ್ಯವಸ್ಥಾಪಕ ಕಲ್ಲೂರು ನಾಗೇಶ್ ಇದ್ದರು.