ದ.ಕ: ಬ್ಯಾಂಕ್ ಖಾತೆ ಹ್ಯಾಕರ್‌ಗಳ ಸುಳಿಗೆ ಸಿಲುಕಿ ವಂಚನೆ ಆರೋಪಕ್ಕೆ ಒಳಗಾಗಿ ಸೌದಿ ಅರೇಬಿಯಾದ ರಿಯಾದ್‌ನ ಜೈಲಿನಲ್ಲಿ ಕಳೆದ 11 ತಿಂಗಳಿನಿಂದ ಬಂಧಿಯಾಗಿದ್ದ ಕಡಬ ತಾಲೂಕಿನ ಐತ್ತೂರು ಗ್ರಾಮದ ಮೂಜೂರು ನಿವಾಸಿ ಚಂದ್ರಶೇಖರ್ ಕೊನೆಗೂ ಬಂಧಮುಕ್ತರಾಗಿದ್ದಾರೆ.
ನ 20 ರಂದು ಸ್ವದೇಶಕ್ಕೆ ಆಗಮಿಸಲಿದ್ದಾರೆ. ರಿಯಾದ್‌ನಿಂದ ಅಲ್ಲಿನ ಪೊಲೀಸರು ಚಂದ್ರಶೇಖರ್ ಅವರನ್ನು ವಿಮಾನದಲ್ಲಿ ಮುಂಬಯಿಗೆ ಕಳುಹಿಸಿಕೊಡಲಿದ್ದು, ಅಲ್ಲಿಂದ ಅವರು ಸಂಜೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಲಿದ್ದಾರೆ ಎಂದು ತಿಳಿದುಬಂದಿದೆ.
ಸೌದಿ ಅರೇಬಿಯಾಕ್ಕೆ 2022ರಲ್ಲಿ ತೆರಳಿದ್ದರು. ಅಲ್ಲಿ ಅಲ್ಪಾನರ್ ಸೆರಾಮಿಕ್ಸ್ ಎಂಬ ಕಂಪೆನಿಯಲ್ಲಿದ್ದರು. 2022ರ ನವೆಂಬರ್‌ನಲ್ಲಿ ಮೊಬೈಲ್ ಮತ್ತು ಸಿಮ್ ಖರೀದಿಗೆ ರಿಯಾದ್‌ನ ಅಂಗಡಿಗೆ ಭೇಟಿ ನೀಡಿದ್ದರು. ಅರ್ಜಿಯೊಂದಕ್ಕೆ ಎರಡು ಬಾರಿ ಹೆಬ್ಬೆಟ್ಟು (ತಂಬ್) ಸಹಿ ನೀಡಿದ್ದರು.
ವಾರದ ಬಳಿಕ ಅವರಿಗೆ ಅರೇಬಿಕ್ ಭಾಷೆಯಲ್ಲಿ ಹೊಸ ದೂರವಾಣಿ ಸಂಖ್ಯೆಗೆ ಸಂದೇಶ ಬಂದಿತ್ತು. ಅದನ್ನು ತೆರೆದು ಚಂದ್ರಶೇಖರ್ ನೋಡಿದ್ದರು. 2 ದಿನಗಳ ಬಳಿಕ ದೂರವಾಣಿ ಕರೆ ಬಂದು ಸಿಮ್‌ನ ಬಗ್ಗೆ ಮಾಹಿತಿ ಕೇಳಲಾಗಿತ್ತು. ಒಟಿಪಿ ತಿಳಿಸಿದ್ದರು. ವಾರದ ಬಳಿಕ ಅಲ್ಲಿನ ಪೊಲೀಸರು ಬಂದು ಚಂದ್ರಶೇಖರ್ ಅವರನ್ನು ಬಂಧಿಸಿದ್ದರು.
ಚಂದ್ರಶೇಖರ್‌ಗೆ ತಿಳಿಯದಂತೆ ಅಲ್ಲಿನ ಬ್ಯಾಂಕೊಂ ದರಲ್ಲಿ ಅವರದೇ ಹೆಸರಿನಲ್ಲಿ ಹ್ಯಾಕರ್‌ಗಳು ಖಾತೆ ತೆರೆದಿದ್ದರು. ಅಲ್ಲಿನ ಮಹಿಳೆ ಯೊಬ್ಬರ ಖಾತೆಯಿಂದ ಚಂದ್ರಶೇಖರ್ ಖಾತೆಗೆ 22 ಸಾವಿರ ರಿಯಲ್ ಜಮೆಯಾಗಿ, ಅದರಿಂದ ಕೂಡಲೇ ಬೇರೆ ಯಾವುದೋ ದೇಶಕ್ಕೆ ಆ ಹಣ ವರ್ಗಾವಣೆಯಾಗಿತ್ತು.
ಹಣ ಕಳೆದುಕೊಂಡ ಮಹಿಳೆಯು ಚಂದ್ರಶೇಖರ್ ಅವರ ಖಾತೆಗೆ ಹಣ ಜಮೆಯಾಗಿರುವುದನ್ನು ಗಮನಿಸಿ ಪೊಲೀಸರಿಗೆ ದೂರು ನೀಡಿದ್ದರು. ಆ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು. ಬಂಧನವಾಗಿರುವ ಬಗ್ಗೆ ಚಂದ್ರಶೇಖರ್ ಅವರ ಗೆಳೆಯರು ಮನೆ ಯವರಿಗೆ ತಿಳಿಸಿದ್ದರು. ಜೈಲಿನಲ್ಲಿ ಇರುವ ವೇಳೆ ದಿನದಲ್ಲಿ ಕೇವಲ 2 ನಿಮಿಷ ಮಾತ್ರ ದೂರವಾಣಿ ಕರೆ ಮಾಡಲು ಚಂದ್ರಶೇಖರ್ ಅವರಿಗೆ ಅವಕಾಶ ನೀಡಲಾಗಿತ್ತು. ಅಲ್ಲಿನ ಸ್ನೇಹಿತರಿಗೂ ಅವರನ್ನು ಭೇಟಿಯಾಗಲು ಅವಕಾಶವಿರಲಿಲ್ಲ.
ಚಂದ್ರಶೇಖರ್ ಅವರ ಸ್ನೇಹಿತರು 10 ಲಕ್ಷ ರೂ. ಸಂಗ್ರಹಿಸಿ ಅಲ್ಲಿನ ವಕೀಲರಿಗೆ ನೀಡಿದ್ದರು. ಹಣ ಕಳೆದುಕೊಂಡ ಮಹಿಳೆಗೆ ಸುಮಾರು 6 ಲಕ್ಷ ರೂ. ಹಣವನ್ನು ಪಾವತಿಸಲಾಗಿತ್ತು. ಆದರೂ ಬಿಡುಗಡೆ ಸಾಧ್ಯವಾಗಿರಲಿಲ್ಲ, ಮಾಧ್ಯಮ ವರದಿಯ ಬಳಿಕ ಅಲ್ಲಿನ ಕಂಪೆನಿ ಎಚ್ಚೆತ್ತುಕೊಂಡು ನಿರಪರಾಧಿ ಚಂದ್ರಶೇಖರ್ ಅವರ ಬಿಡುಗಡೆಗೆ ಕೈಜೋಡಿಸಿತ್ತು. ಚಂದ್ರಶೇಖರ್ ಬಿಡುಗಡೆಗೆ ಮಡಿಕೇರಿಯ ಬಿ.ಆರ್.ಅರುಣ್‌ಕುಮಾರ್ ಹಾಗೂ ಮಂಗಳೂರಿನ ಕಬೀರ್ ನಿರಂತರ ಪ್ರಯತ್ನ ಮಾಡಿದ್ದರು.
ಐತ್ತೂರು ಗ್ರಾಮದ ಮೂಜೂರು ನಿವಾಸಿ ದಿ| ಕೆಂಚಪ್ಪ ಗೌಡ ಹಾಗೂ ಹೇಮಾವತಿ ದಂಪತಿಗೆ ಚಂದ್ರ ಶೇಖರ್ ಕೊನೆಯ ಪುತ್ರ. ಅವರಿಗೆ ಜನವರಿ ಯಲ್ಲಿ ಊರಿನಲ್ಲಿ ಮದುವೆ ನಿಶ್ಚಿತಾರ್ಥ ನಿಗದಿಯಾಗಿತ್ತು. ಮದುವೆಯ ದಿನಾಂಕವೂ ಅಂತಿಮವಾಗಿತ್ತು. ಆ ಸಿದ್ಧತೆ ಯಲ್ಲಿ ಇರುವಾಗಲೇ ಅವರ ಬಂಧನವಾಗಿತ್ತು.