Friday, July 19, 2024

ಕಂಡು ಕೇಳರಿಯದ ಪ್ರವಾಹಕ್ಕೆ 315 ಜನರು ಸಾವು – ಕ್ರಿಕೆಟಿಗನಿಂದ 17 ಕೋಟಿ ನೆರವು

ತಾಲಿಬಾನಿಗಳ ದುರಾಡಳಿತದಿಂದ ಕಂಗೆಟ್ಟಿದ್ದ ಅಫ್ಘಾನಿಸ್ತಾನದ ಜನತೆ ಇದೀಗ ರಣಭೀಕರ ಮಳೆ, ಪ್ರವಾಹದ ಹೊಡೆತಕ್ಕೆ ನಲುಗಿದ್ದಾರೆ. ಕಳೆದ 3-4 ದಿನಗಳಿಂದ ಸುರಿಯುತ್ತಿರುವ ವರುಣ ಕಣಿವೆ ನಾಡನ್ನು ಕಂಗಾಲಾಗಿಸಿದೆ. ಉಕ್ಕಿ ಹರಿದ ನದಿಗಳು ಅಪಾರ ಸಾವು-ನೋವುಗಳನ್ನು ಉಂಟು ಮಾಡಿದೆ, ಅಫ್ಘಾನಿಸ್ತಾನದ ಪರಿಸ್ಥಿತಿ ಅಲ್ಲೋಲ-ಕಲ್ಲೋಲ ಆಗಿದೆ.

ಅಫ್ಘಾನಿಸ್ತಾನ ರಣಭೀಕರ ಪ್ರವಾಹಕ್ಕೆ ಅಕ್ಷರಶಃ ತತ್ತರಿಸಿ ಹೋಗ್ತಿದೆ. ಉತ್ತರ ಅಫ್ಘಾನಿಸ್ತಾನದ ಹಲವೆಡೆ ಕಳೆದ 3-4 ದಿನಗಳಿಂದ ಕಂಡು ಕೇಳರಿಯದ ಮಳೆಯಾಗ್ತಿದೆ. ನದಿ, ತೊರೆಗಳು ಉಕ್ಕಿ ಹರಿದ ಪರಿಣಾಮ ಎಲ್ಲೆಲ್ಲೂ ಪ್ರವಾಹ ಸೃಷ್ಟಿಸಿಯಾಗಿದೆ.

ಅಫ್ಘಾನಿಸ್ತಾನದಲ್ಲಿ ಮಳೆ ಹಾಗೂ ಪ್ರವಾಹದಿಂದ 300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಪ್ರವಾಹಕ್ಕೆ ಸಿಲುಕಿ 1,600ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಮಾಹಿತಿ ಲಭ್ಯವಾಗಿದೆ.

ಜನವಸತಿ ಪ್ರದೇಶಗಳತ್ತ ಕೆಸರು ಮಿಶ್ರಿತ ನೀರು ನುಗ್ಗಿದ ಪರಿಣಾಮ ಅಯೋಮವಾಗಿದೆ. ಮತ್ತೊಂದೆಡೆ ಗುಡ್ಡಗಾಡು ಪ್ರದೇಶಗಳಲ್ಲಿನ ಮನೆಗಳು ಕೆಸರುಮಯ ನೀರಿನಿಂದ ಸಮಾಧಿಯಾಗಿವೆ. ಪ್ರವಾಹ ಎಲ್ಲವನ್ನೂ ಅಪೋಶನ ತೆಗೆದುಕೊಂಡಿದೆ. ಸಾವಿರಾರು ಮನೆಗಳು ಕೆಸರಿನಲ್ಲಿ ಹೂತು ಹೋಗಿವೆ.

ತನ್ನ ದೇಶದಲ್ಲಿ ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ಕ್ರಿಕೆಟಿಗ ರಶೀದ್ ಖಾನ್ ಮಿಡಿದಿದ್ದಾರೆ. ಅಫ್ಘಾನಿಸ್ತಾನದ ಕರೆನ್ಸಿ ರೂಪದಲ್ಲಿ 1.5 ಮಿಲಿಯನ್ ಅಂದ್ರೆ ಭಾರತದ ರೂಪಾಯಿ ಲೆಕ್ಕದಲ್ಲಿ 17 ಕೋಟಿ ನೆರವು ಘೋಷಿಸಿದ್ದಾರೆ.

Related Articles

Latest Articles