ಪಿಯುಸಿ, ಪ್ರೇಮಿಸಂ, ಜರಾಸಂಧ, ಸಂಯುಕ್ತ, ಬಜಾರ್ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿರುವ ನಟ ಚೇತನ್ ಚಂದ್ರ ಅವರ ಮೇಲೆ ಕಿಡಿಗೇಡಿಗಳ ತಂಡ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.
ತಾಯಂದಿರ ದಿನದ ಪ್ರಯುಕ್ತ ತಾಯಿಯನ್ನು ದೇವಸ್ಥಾನಕ್ಕೆ ಕರೆದುಕೊಂಡು ಕಾರಿನಲ್ಲಿ ವಾಪಸ್ ಬರುವಾಗ ಚೇತನ್ ಮೇಲೆ ಸುಮಾರು 20 ಜನರ ಗ್ಯಾಂಗ್ ಹಲ್ಲೆ ಮಾಡಿದೆ. ಘಟನೆ ಕುರಿತು ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ.
“ನಾವು ಒಂದು ಘಟನೆಯಲ್ಲಿ ಸಿಲುಕಿಕೊಂಡೆವು. ನಮ್ಮ ಗಾಡಿಯನ್ನು ಅಡ್ಡ ಹಾಕಿದರು. ಸುಮಾರು 20 ಜನರು ಸೇರಿಕೊಂಡು ನಮಗೆ ಹೊಡೆದಿದ್ದಾರೆ. ಕಗ್ಗಲಿಪುರ ಸಮೀಪ ಒಂದು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದೇನೆ. ಇವತ್ತು ಮದರ್ಸ್ ಡೇ ಎಂದು ಅಮ್ಮನ ಕರೆದುಕೊಂಡು ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದೆ” ಎಂದು ನಟ ಚೇತನ್ ಚಂದ್ರ ಅವರು ಘಟನೆಯನ್ನು ವಿವರಿಸಿದ್ದಾರೆ. ಈ ಸಂದರ್ಭದಲ್ಲಿ ತನ್ನ ದೇಹಕ್ಕೆ ಆಗಿರುವ ಗಾಯವನ್ನು ವಿಡಿಯೋದಲ್ಲಿ ತೋರಿಸಿದ್ದಾರೆ.
ದೇವಸ್ಥಾನಕ್ಕೆ ಬಂದು ವಾಪಸ್ ಬರುತ್ತಿದ್ದೆ. ಅವನು ಚೆನ್ನಾಗಿ ಕುಡಿದಿದ್ದ. ನನ್ನ ಗಾಡಿಗೆ ತಾಗಿಸಿದ. ಅಲ್ಲಿಂದ ನಾನು ಸ್ಲೋ ಮಾಡಿದೆ. ಆದರೂ ಅವನು ನಿಲ್ಲಿಸಲಿಲ್ಲ. ಅವರ ಜಾಗಕ್ಕೆ ಬಂದಾಗ ನಿಲ್ಲಿಸಿದ. ತುಂಬಾ ಜನರ ಸೇರಿದ್ದರು. ಏನೋ ರಾಬರಿ ನಡೆಯುತ್ತಿದೆ ಅಂದುಕೊಂಡೆ. ಆದರೆ, ಆ ರೀತಿ ಕಾಣಿಸಲಿಲ್ಲ. ಅವನ ತಮ್ಮನೋ, ತಂಗಿನೋ ಓಡಿ ಬಂದ್ರು. ಆಮೇಲೆ ಸುಮಾರು 20 ಜನರಷ್ಟು ಜನರು ಬಂದ್ರು ಹೊಡೆದ್ರು” ಎಂದು ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ. ಪೊಲೀಸರ ಸೂಚನೆಯ ಮೇರೆಗೆ ಮೊದಲು ಪ್ರಥಮ ಚಿಕಿತ್ಸೆ ಮಾಡಿಕೊಳ್ಳಲು ಆಸ್ಪತ್ರೆಗೆ ಬಂದೆ” ಎಂದು ಅವರು ಮಾಹಿತಿ ನೀಡಿದ್ದಾರೆ.
“ಈ ಲೈವ್ ಅನ್ನು ನನ್ನ ಅಮ್ಮ, ಪಾಪು, ಹೆಂಡ್ತಿ ನೋಡ್ತಾ ಇರ್ತಾರೆ. ಫ್ರೆಂಡ್ಸ್ ನೋಡ್ತಾ ಇರ್ತಾರೆ. ಗಾಬರಿಯಾಗಬೇಡಿ. ನನ್ನಲ್ಲಿ ಘಟನೆಯ ಕುರಿತು ವಿಡಿಯೋ ಇದೆ. ನನಗೆ ನ್ಯಾಯ ಬೇಕು” ಎಂದು ಚೇತನ್ ಚಂದ್ರ ಅವರು ಘಟನೆಯ ಕುರಿತು ಇನ್ನಷ್ಟು ವಿವರಣೆ ನೀಡಿದ್ದಾರೆ. ಇವರ ವಿಡಿಯೋಗೆ ಸಾಕಷ್ಟು ಜನರು ಕಾಮೆಂಟ್ ಮಾಡಿದ್ದು “ನಿಮ್ಮಂಥ ಸೆಲೆಬ್ರಿಟಿಗಳಿಗೆ ಹೀಗಾದ್ರೆ ನಮ್ಮಂಥ ಜನ ಸಾಮಾನ್ಯರ ಕಥೆ ಏನು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು” ಎಂದು ಹೇಳಿದ್ದಾರೆ. ಸಾಕಷ್ಟು ಜನರು ಜಸ್ಟಿಸ್ ಫಾರ್ ಚೇತನ್ ಚಂದ್ರ ಎಂಬ ಹ್ಯಾಷ್‌ಟ್ಯಾಗ್ ಮೂಲಕ ನ್ಯಾಯ ಬಯಸಿದ್ದಾರೆ.