ಪುಣೆ: ಬೈಕ್‌ನಲ್ಲಿ ಬಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಸದಸ್ಯ, ಮಾಜಿ ಕಾರ್ಪೋರೇಟರ್ ಒಬ್ಬರನ್ನು ಭೀಕರವಾಗಿ ಹತ್ಯೆಗೈದ ಘಟನೆ ನಡೆದಿದೆ. ಸೆ. ೧ರ ತಡರಾತ್ರಿ ಸುಮಾರು 9:30ರ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಗಳ ತಂಡ ದಾಳಿ ನಡೆಸಿದೆ. ವನರಾಜ್ ಅಂದೇಕರ್ ಹತ್ಯೆಯಾದ ಮಾಜಿ ಕಾರ್ಪೋರೇಟರ್. ಕೃತ್ಯ ನಡೆದ ಒಂದೇ ದಿವಸಕ್ಕೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹರಿತವಾದ ಆಯುಧಗಳಿಂದ ವನರಾಜ್ ಅಂದೇಕರ್ ಕುತ್ತಿಗೆ ಹಾಗೂ ತಲೆಗೆ ಹಲ್ಲೆ ನಡೆಸಿದ್ದಾರೆ. ತೀವ್ರವಾದ ದಾಳಿಯಿಂದ ಅಂದೇಕರ್ ಮೃತಪಟ್ಟಿದ್ದಾರೆ. ಮೃತರ ಅಂಗಿಯಲ್ಲಿ ಖಾಲಿ ಕಾರ್ಟ್ರಿಡ್ಜ್ ಕಂಡುಬಂದಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರವೀಣ್ ಪಾಟೀಲ್ ಹೇಳಿದ್ದಾರೆ.
ದಾಳಿಯ ಹಿಂದೆ ಅಂದೇಕರ್ ಸಂಬಂಧಿಕರ ಪಾತ್ರವಿದೆ ಎಂದು ಶಂಕಿಸಿ ಕುಟುಂಬಸ್ಥರು ಎಫ್‌ಐಆರ್ (FIR) ದಾಖಲಿಸಿದ್ದಾರೆ. ಅಂದೇಕರ್ ದೇಹದಲ್ಲಿ 5 ಬಾರಿ ಗುಂಡು ಹಾರಿಸಿರುವ ಗುರುತು ಹಾಗೂ ಚೂಪಾದ ಶಸ್ತ್ರಗಳಿಂದ ಚುಚ್ಚಿರುವ ಗಾಯಗಳ ಗುರುತುಗಳಿವೆ ಎಂದು ಶವ ಪರೀಕ್ಷೆಯ ವೇಳೆ ತಿಳಿದು ಬಂದಿದೆ ಎಂದು ಹೇಳಿದರು.
ಪ್ರಕರಣ ಸಂಬಂಧ 10 ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿರುವುದಾಗಿ ವರದಿಯಾಗಿದೆ. ಪ್ರಕರಣದ ಎಫ್‌ಐಆರ್‌ನಲ್ಲಿ ವನರಾಜ್ ಅವರ ಸಹೋದರಿ ಸಂಜೀವನಿ ಕೋಮ್ಕರ್, ಅವರ ಪತಿ ಜಯಂತ್ ಲಕ್ಷ್ಮಣ್ ಕೋಮ್ಕರ್, ಅವರ ಎರಡನೇ ಸಹೋದರಿ ಕಲ್ಯಾಣಿ ಮತ್ತು ಅವರ ಪತಿ ಗಣೇಶ್ ಲಕ್ಷ್ಮಣ್ ಕೋಮ್ಕರ್ ಮತ್ತು ಕುಟುಂಬದ ಮತ್ತೊಬ್ಬ ಸದಸ್ಯ ಪ್ರಕಾಶ್ ಜಯಂತ್ ಕೋಮ್ಕರ್ ಮತ್ತು ಹಲವರ ಹೆಸರುಗಳಿವೆ.
ಪೊಲೀಸರು ಭಾರತೀಯ ನ್ಯಾಯ ಸಂಹಿತಾ (BNS) ಸೆಕ್ಷನ್ 103 (1) ಕೊಲೆಗೆ ಸಂಬಂಧಿಸಿದಂತೆ ಮತ್ತು 61 (2) ಕ್ರಿಮಿನಲ್ ಪಿತೂರಿ ಮತ್ತು ಭಾರತೀಯ ಶಸ್ತ್ರಾಸ್ತ್ರ ಕಾಯಿದೆಯ ಸೆಕ್ಷನ್‌ಗಳ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸರು ಸೋಮವಾರ ಬೆಳಗ್ಗೆ ಗಣೇಶ್ ಲಕ್ಷ್ಮಣ್ ಕೋಮ್ಕರ್ (37) ಮತ್ತು ಜಯಂತ್ ಲಕ್ಷ್ಮಣ್ ಕೋಮ್ಕರ್ (52) ಅವರನ್ನು ಬಂಧಿಸಿದ್ದರು. ಸಂಜೀವನಿ ಕೋಮ್ಕರ್ (44), ಪ್ರಕಾಶ್ ಕೋಮ್ಕರ್ (51), ಮತ್ತು ಸೋಮನಾಥ ಗಾಯಕ್ವಾಡ್ (41) ಸೇರಿದಂತೆ ಇನ್ನೂ ಮೂವರು ಆರೋಪಿಗಳನ್ನು ಸಹ ಬಂಧಿಸಲಾಗಿದ್ದು, ಮಂಗಳವಾರ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಅಂದೇಕರ್ ಗ್ಯಾಂಗ್‌ನ ಮಾಜಿ ಸಹಾಯಕ ಗಾಯಕ್‌ವಾಡ್ ಈ ಪಿತೂರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ಒಟ್ಟು ಹದಿಮೂರು ಮಂದಿಯ ಬಂಧನವಾಗಿದೆ.