Thursday, November 14, 2024

ಭೂಮಿಯೊಳಗೆ ಬಚ್ಚಿಟ್ಟಿದ್ದ ಗಾಂಜಾ ಪತ್ತೆ ಹಚ್ಚಿದ ಪೊಲೀಸ್ ಶ್ವಾನ

ಮಾದಕ ವಸ್ತು ವಿರುದ್ಧ ಸಮರ ಸಾರಿರುವ ಕೊಡಗು ಪೊಲೀಸರು ಆರೋಪಿಯನ್ನು ಗಾಂಜಾ ಸಮೇತವಾಗಿ ಬಂಧಿಸಿದ್ದಾರೆ. ಗಾಂಜಾ ಪತ್ತೆಹಚ್ಚಿದ್ದು ಪೊಲೀಸ್ ಶ್ವಾನ ಎಂಬುವುದು ವಿಶೇಷ.

ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಸರಬರಾಜು, ಬಳಕೆ ಹಾಗೂ ಮಾರಾಟದ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಸಾರ್ವಜನಿಕರಿಂದ ದೂರು ಬರುತ್ತಿತ್ತು. ಮಾದಕ ವಸ್ತುಗಳ ಮಾರಾಟ ತಡೆಗಟ್ಟುವ ಹಿನ್ನೆಲೆಯಲ್ಲಿ ಸೋಮವಾರಪೇಟೆ ಉಪವಿಭಾಗದ ಡಿಎಸ್‌ಪಿ ಆರ್.ವಿ.ಗಂಗಾಧರಪ್ಪ, ಕುಶಾಲನಗರದ ಸಿಪಿಐ ರಾಜೇಶ್.ಕೆ ಹಾಗೂ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಮೋಹನ್ ರಾಜು.ಪಿ ಮತ್ತು ಸಿಬ್ಬಂದಿಯು ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿತ್ತು.

ಮಾರ್ಚ್ 17 ರಂದು ಬಸವನಹಳ್ಳಿ ಗ್ರಾಮ ಸಮೀಪ ತೆಪ್ಪದಕಂಡಿ ಎಂಬಲ್ಲಿ ನಿಷೇಧಿತ ಮಾದಕ ವಸ್ತುವನ್ನು ಮಾರಾಟ ಹಾಗೂ ಸರಬರಾಜು ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿ, ದ್ವಿ-ಚಕ್ರ ವಾಹನದ ಜತೆಗೆ ಗಾಂಜಾವನ್ನು ವಶಕ್ಕೆ ಪಡೆಯಲಾಯಿತು.

ಬಂಧಿತ ಆರೋಪಿಯನ್ನು 37 ವರ್ಷದ ಬಸವರಾಜು ಎಂದು ಗುರುತಿಸಲಾಗಿದೆ. ಈತ ಪಿರಿಯಾಪಟ್ಟಣ ತಾಲ್ಲೂಕು ದೊಡ್ಡಹೊಸೂರು ಗ್ರಾಮದ ನಿವಾಸಿ. ಆತನ ಬಳಿಯಿದ್ದ 245 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದು ಕ್ರಮ ಕೈಗೊಳ್ಳಲಾಗಿದೆ.

ಕೊಡಗು ಜಿಲ್ಲಾ ಪೊಲೀಸ್ ಘಟಕದ ಮಾದಕ ದ್ರವ್ಯ ಪತ್ತೆ ಪರಿಣತಿ ಹೊಂದಿದ “ಕಾಪರ್” ಎಂಬ ಶ್ವಾನವು ಆರೋಪಿ ಮನೆಯ ಶೌಚಾಲಯದ ಹಿಂಭಾಗದಲ್ಲಿ ಭೂಮಿಯ ಒಳಗೆ ಬಚ್ಚಿಟ್ಟಿದ್ದ ಗಾಂಜಾವನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರವಹಿಸಿತು.

ಈ ಪ್ರಕರಣದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳು, ಸಿಬ್ಬಂದಿ ಮತ್ತು ಕಾಪರ್ ಶ್ವಾನ ಹಾಗೂ ಅದರ ನಿರ್ವಾಹಕ ಮನಮೋಹನ್.ಬಿ.ಪಿ. ರನ್ನು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ಲಾಘಿಸಿದ್ದಾರೆ.

Related Articles

Latest Articles