Saturday, January 25, 2025

ಧಾರ್ಮಿಕತೆಯ ಗೌರವ ಕೆಡಿಸುತ್ತಿರುವ ಡಿಜೆ ಶೋಭಾಯಾತ್ರೆ

ಡಾ. ಅರುಣ್ ಉಳ್ಳಾಲ್ ಅವರ ಫೇಸ್‌ಬುಕ್‌ ಖಾತೆಯಿಂದ‌ ಆಯ್ದ ಬರಹ.

ಈ ಬಾರಿಯ ಮಂಗಳೂರು ದಸರಾದಲ್ಲಿ ದೈವಾರಾಧನೆಯನ್ನು ಬಿಂಬಿಸುವ ಸ್ಥಬ್ದ ಚಿತ್ರ, ವೇಷಭೂಷಣಗಳನ್ನು ನಿಷೇಧ ಮಾಡಿರುವುದು ನೊರೆಹಾಲು ಕುಡಿದಷ್ಟು ಸಂತೋಷ ತಂದಿದೆ.

ಇದಕ್ಕೆ ಒತ್ತಾಯಿಸಿ ಗೆದ್ದ ಅಭಿಮಾನದ ‘ಜೈ ತುಳುನಾಡ್ (ರಿ.)’ ಸಂಘಟನೆಯ ಸರ್ವ ಸದಸ್ಯಮಿತ್ರರಿಗೂ ಶಿರಸಾ ಅಭಿನಂದನೆಗಳು.

ಆದರೆ, ಉಳಿದ ಶಾರದೋತ್ಸವ ಸಮಿತಿಯವರಿಗೆ ಈ ಬಗೆಯ ದಿಟ್ಟ ಹೇಳಿಕೆಯನ್ನು ನೀಡಲು ಯಾರ ಭಯವೋ?

ಇದೇ ಸಂದರ್ಭದಲ್ಲಿ ಒಮ್ಮೆ ಆಲೋಚಿಸಿ ನೋಡೋಣ. ನಾವೆಲ್ಲರೂ ಆದರ್ಶವೆಂದು ಪರಿಭಾವಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಹಿಂದೂ ಧಾರ್ಮಿಕತೆಯು ಅಮಲು-ಅಸಭ್ಯವಿಲ್ಲದೆ ಸಾತ್ವಿಕವಾಗಿಯೇ ಇರಬೇಕು ಎಂದವರು.‌ ಆದರೆ ಅವರೇ ಸ್ಥಾಪಿಸಿದ ಕುದ್ರೋಳಿಯ ದೇಗುಲದ ಪ್ರಧಾನ ಕಾರ್ಯಕ್ರಮದಲ್ಲಿ ಕುಡಿದು ಕುಪ್ಪಳಿಸಲು ಅಮಲು ಡಿಜೆಗಳಿಗೆ ಅವಕಾಶ ಮಾಡಿಕೊಟ್ಟಿರುವುದು ಗುರುತತ್ವಕ್ಕೆ ವಿರುದ್ಧ ‌ಮತ್ತು ನೇರ ಅಪಚಾರವಲ್ಲವೇ? ಗುರುಗಳು ಇದ್ದಿದ್ದರೆ ಅವರು ಇದನ್ನೆಲ್ಲಾ ಕಂಡು ದಸರಾ ಉತ್ಸವವನ್ನೇ ತೊರೆದು ಹೋಗುತ್ತಿದ್ದರು ಎಂಬುದು ಅವರ ಜೀವನದ ಎಷ್ಟೋ ಪೂರ್ವನಿದರ್ಶನಗಳನ್ನು ನೆನಪಿಸಿ ಕೊಂಡರೆ ಸ್ಪಷ್ಟವಾಗುತ್ತದೆ.

ಹಲವು ಕರ್ಮಟ ಮನಸ್ಸುಗಳ ವಿರೋಧಗಳ ನಡುವೆಯೂ ಪ್ರಗತಿಪರ ಕ್ರಾಂತಿಗೆ ಹೆಸರಾದ ಶ್ರೀಕ್ಷೇತ್ರ ಕುದ್ರೋಳಿಯಿಂದಲೇ ಡಿಜೆ ಮುಕ್ತ ದಸರಾ ಮೆರವಣಿಗೆಗೆ ನಾಂದಿಯಾದರೆ ಹೆಚ್ಚು ಅರ್ಥವಿರುತ್ತದೆ.
ಈ ಬಾರಿ ಇಂತಹ ಸ್ವಾಗತಾರ್ಹ ಬದಲಾವಣೆಗೆ ಕಾರಣವಾದ ಕುದ್ರೋಳಿ ಕ್ಷೇತ್ರದ ಆಡಳಿತ ಮಂಡಳಿಯು ಮುಂದಿನ ದಸರಾಕ್ಕಾಗುವಾಗ ‘ಡಿಜೆ ಗುರುತತ್ವದ ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ ಈ ಬಾರಿಯ 2024 ಮಂಗಳೂರು ದಸರಾ ಮೆರವಣಿಗೆಯಲ್ಲಿ ಡಿಜೆಗೆ ಅವಕಾಶ ಇಲ್ಲ’ ಎಂಬ ನಿರ್ಣಾಯಕ ಹೇಳಿಕೆಯನ್ನು ಕೊಟ್ಟುಬಿಡಲಿ. ಮನಸ್ಸು ಮಾಡಿದರೆ ಈ ವರ್ಷವೇ ಇದನ್ನು ಘೋಷಿಸಬಹುದು.

ಈ ಕಾರಣಕ್ಕೆ ಯಾವ ಡಿಜೆಪ್ರಿಯ ಯುವಕರ ಪಡೆ ಭಾಗವಹಿಸದೆ ಇದ್ದರೂ ಅವರನ್ನು ಲೆಕ್ಕಿಸದೆ ಬಿಟ್ಟುಬಿಡೋಣ. ಪವಿತ್ರ ಸಂದರ್ಭದಲ್ಲಿ ಮದ್ಯಕುಡಿದು ಭಾಗವಹಿಸುವವರು ಧರ್ಮಾಭಿಮಾನಿಗಳು ಹೇಗೆ ತಾನೆ ಆದಾರು? ಅದು ಶಾಸ್ತ್ರ ತಪ್ಪಿ ನಡೆದಂತಲ್ಲವೇ?

ಹಿಂದೆ ಕೆಲ ಕುಡುಕ ಗಂಡಸರು ಮಾತ್ರ ಟ್ಯಾಬ್ಲೋ ಎದುರು ಕುಣಿಯುತ್ತಿದ್ದರು. ಆ ನಂತರ ಎಲ್ಲಾ ಯುವಕರೂ ಆ ಕುಡುಕರ ಗುಂಪಿಗೆ ಸದಸ್ಯರಾದರು. ಈಗ ಮಹಿಳೆಯರೂ ಕೈಯಲ್ಲಿ ಮದ್ಯದ ಬಾಟಲಿಗಳನ್ನು ಹಿಡಿದು ಚಿಮ್ಮಿಸಿ ಮೈಮೇಲಿನ ಉಡುಪಿನ ಪರಿವೆಯೂ ಇಲ್ಲದೆ ಪಾನಮತ್ತರಾಗಿ ಕುಣಿಯತೊಡಗಿದ್ದಾರೆ. ಸದ್ಯದಲ್ಲೇ ಹೊಸ ಟ್ರೆಂಡ್. ಗಂಡಹೆಂಡತಿ ಇಬ್ಬರೂ ಅಮಲೇರಿಸಿಕೊಂಡು ಜೊತೆಜೊತೆ ಮೈಸೋಕಿಸಿಕೊಂಡು ನಲಿದಾಡುತ್ತಾರೆ.‌ ಆ ನಂತರ ಗಂಡಹೆಂಡತಿ ಅಲ್ಲದವರೂ ಮೈಸೋಕಿಸಿಕೊಂಡು ಓಲಾಡಿಕೊಂಡು ತೇಲಾಡಿಕೊಂಡು ಕುಣಿಯತೊಡಗುತ್ತಾರೆ.

ಉತ್ಸವವೆಂಬುದು ನಮ್ಮ ಹೆಮ್ಮೆಯ ಸಂಸ್ಕೃತಿ, ಇದೊಂದು ಸಾಂಸ್ಕೃತಿಕ ಶೋಭಾಯಾತ್ರೆ ಎಂಬಂತೆ ಕರೆಸಿಕೊಳ್ಳುವಾಗ ಇವೆಲ್ಲ ಎಷ್ಟರ ಮಟ್ಟಿಗೆ ಸಮಂಜಸ? ಹಿಂದೆ ಸಾಗಿ ಬರುವುದು ಹಿಂದೆ ಡಿಸೆಂಬರ್ 31 ರಂದು ನಿಷ್ಕಾರಣವಾಗಿ ಸುಡುತ್ತಿದ್ದ ಮುದಿಬೊಂಬೆಯಲ್ಲ. ಜಗಜ್ಜನನಿ ಶ್ರೀ ಶಾರದೆಯ ಸಾಲಂಕೃತ ಪೂಜ್ಯ ವಿಗ್ರಹ ಎಂಬುದೇ ಮರೆತಂತಿದೆ.

ಏನು ಹೇಳೋಣ? ಯಾರಿಗೆ ದೂರೋಣ? ಧರ್ಮಪರ ಸಂಘಟನೆಗಳೇ ಇಂತವಕ್ಕೆ ಅವಕಾಶ ಮಾಡಿಕೊಟ್ಟಿರುವುದು ನಮ್ಮ ಮಂಗಳೂರಿನ ದುರಂತ.’ಹಬ್ಬ ಎಂಬುದು ಸಂತೋಷ ಸಂಭ್ರಮವಲ್ಲವೇ? ಕುಣಿದರೆ ತಪ್ಪೇನು?’ ಎಂಬ ಕಾರಣ ಕೊಡುವವರು ಅನೇಕರಿದ್ದಾರೆ.‌ ಹೇಗೆ‌ ಬೇಕಾದರೂ ನಡೆದುಕೊಳ್ಳ ಬಹುದು ಎಂಬುದು ಹುಚ್ಚು ಸ್ವೇಚ್ಛೆಯಾಗುತ್ತದೆ. ಒಂದು ಬಾರ್‌ನ ವಾತಾವರಣ ಧಾರ್ಮಿಕ ಮೆರವಣಿಗೆಯ ನಡುವೆ ಮೂಡುವುದಾದರೆ ಆ ಸಂತೋಷವನ್ನು ಒಪ್ಪಲಾದೀತೇ? ಧಾರ್ಮಿಕತೆಯಿಂದಾಗುವ ಸಂತೋಷವು ಅಗ್ಗದ ಮೋಜಿನ ಮಜಾವಳಿಯಾಗಬಾರದು.‌ ಸಾತ್ವಿಕ ಸನ್ಮಾರ್ಗದಲ್ಲಿದ್ದರೆ ಮಾತ್ರ ಅದಕ್ಕೊಂದ ಶೋಭೆ. ಅದು ಶೋಭಾಯಾತ್ರೆ.

ಯಾರೇ ಕೈಬಿಡಲಿ. ಕುದ್ರೋಳಿ ದಸರಾ ಮೆರವಣಿಗೆಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನಾದರ್ಶಗಳನ್ನೇ ಮುಖವಾಣಿಯನ್ನಾಗಿ ಇಟ್ಟುಕೊಂಡಿರುವ ಅಖಿಲ ಭಾರತ ಬಿಲ್ಲವ ಯೂನಿಯನ್, ಬಿಲ್ಲವ ಮಹಾಮಂಡಲ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ, ಬಿಲ್ಲವ ಸಮಾಜ ಸಂಘ, ಯುವವಾಹಿನಿ, ಬಿರ್ವೆರ್ ಕುಡ್ಲ, ನಮ್ಮ ಬಿಲ್ಲವೆರ್ ಇಂತಹ ಸಮರ್ಥ ಸಂಘಟನೆಗಳು ಬೆಂಬಲವಾಗಿ ನಿಂತರೆ ಅಮಲುಮುಕ್ತ ಶೋಭಾಯಾತ್ರೆಯ ಹೊಸಚಿಂತನೆಯಲ್ಲಿ ಗೆಲ್ಲುವುದರಲ್ಲಿ ಕಿಂಚಿತ್ ಸಂದೇಹವೇ ಇಲ್ಲ. ಆಗ ಮಾತ್ರ ಪರಮಪೂಜ್ಯ ಬ್ರಹ್ಮಶ್ರೀ ನಾರಾಯಣ ಗುರುಗಳ ಸಾತ್ವಿಕನೆಲೆಯ ಆರಾಧನೆಯ ನಿಜಾರ್ಥದ ಅನುಷ್ಠಾನಕ್ಕೆ ಕುದ್ರೋಳಿ ಸಾಕ್ಷಿಯಾಗುತ್ತದೆ. ಈ ದಿಟ್ಟ ನಿರ್ಣಯವು ಮಂಗಳೂರಿನ ಮಟ್ಟಿಗೆ ಐತಿಹಾಸಿಕವಾಗುತ್ತದೆ.

‘ನಿಜವಾದ ಹಿಂದೂವಾದವನು ದೇವಿತತ್ವ ಜಾಗೃತವಾಗಿರುವ ಪವಿತ್ರ ನವರಾತ್ರಿ ಹಬ್ಬದಂದು ಶಾಸ್ತ್ರೋಕ್ತ ಪ್ರಾಣಪ್ರತಿಷ್ಠೆಗೈದ ತನ್ನ ಆರಾಧ್ಯ ದೇವರ ಬಿಂಬದೆದುರು ಕುಡಿದು ಅಸಭ್ಯವಾಗಿ ಕುಪ್ಪಳಿಸಲು ಎಂದಿಗೂ ಒಪ್ಪಲಾರ’.

ಸ್ವಸ್ಥ ಹಿಂದೂ ಸಮಾಜಕ್ಕಾಗಿ ನಮ್ಮದಿದು ನಿರಂತರ ಹೋರಾಟ.‌ ಬನ್ನಿ, ನಮ್ಮ ಈ ಆಂದೋಲನಕ್ಕೆ ಕೈ ಜೋಡಿಸಿ

  • ಡಾ. ಅರುಣ್ ಉಳ್ಳಾಲ್ (ಸಂಸ್ಕೃತಿ ಚಿಂತಕರು)

Related Articles

Latest Articles