ಹಾವೇರಿ: ನವರಾತ್ರಿ ಹಬ್ಬದ ಪ್ರಯುಕ್ತ ನವದುರ್ಗೆಯರ ದೇವಸ್ಧಾನದಲ್ಲಿ ನವರಾತ್ರಿ ಹಬ್ಬದ ಸಂಭ್ರಮ.
ನಗರದ ರೈಲ್ವೆ ನಿಲ್ದಾಣ ಸಮೀಪದಲ್ಲಿರುವ ನವದುರ್ಗೆಯರ ದೇವಸ್ಥಾನದಲ್ಲಿ ಒಂದೇ ಗರ್ಭಗುಡಿಯಲ್ಲಿ 9 ದುರ್ಗೆಯರ ಸ್ಥಾಪನೆಯಾಗಿರುವುದು ವಿಶೇಷ.
ಈ ದಿನಗಳಲ್ಲಿ ಪ್ರತಿನಿತ್ಯ ಒಂದೊಂದು ದುರ್ಗಾಮಾತೆಗೆ ವಿಶೇಷವಾಗಿ ಹೂವಿನ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತದೆ.
ಮೊದಲ ದಿನ ಶೈಲಪುತ್ರಿ, 2ನೇ ದಿನ ಬ್ರಹ್ಮಚಾರಿಣೀ, 3ನೇ ದಿನ ಚಂದ್ರಘಂಟಾ, 4ನೇ ದಿನ ಕೂಷ್ಮಾಂಡಾ, 5ನೇ ದಿನ ಸ್ಕಂದಮಾತಾ, 6ನೇ ದಿನ ಕಾತ್ಯಾಯಿನಿ, 7ನೇ ದಿನ ಕಾಲರಾತ್ರಿ, 8ನೇ ದಿನ ಮಹಾಗೌರಿಗೆ ಪೂಜೆ ಸಲ್ಲಿಸಿದರೆ, 9ನೇ ದಿನ ಸಿದ್ಧಿದಾತ್ರಿಗೆ ಪೂಜೆ ಸಲ್ಲಿಸಲಾಗುತ್ತದೆ. ಹೀಗೆ ಪ್ರತಿದಿನ ಒಂದೊಂದು ದುರ್ಗೆಗೆ ಪೂಜೆ ಸಲ್ಲಿಸಲಾಗುತ್ತದೆ.
ಮೂಲ ದೇವಸ್ಥಾನವನ್ನು ಹಕ್ಕಲಮರಿಯಮ್ಮ ದೇವಸ್ಥಾನ ಎಂದು ಕರೆಯಲಾಗುತ್ತದೆ. ಈ ದೇವಸ್ಥಾನದಲ್ಲಿ ಸುಮಾರು 37 ದೇವರ ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ಇದಕ್ಕೆ ದೇವಿ ಪಂಚಾಯತ್ ಎಂದು ಕರೆಯಲಾಗುತ್ತದೆ. ಈ ದೇವಸ್ಥಾನದಲ್ಲಿ ನವಗ್ರಹಗಳನ್ನು ಸ್ಥಾಪಿಸಲಾಗಿತ್ತು. ನವಗ್ರಹಗಳನುಸಾರ ನವವೃಕ್ಷಗಳನ್ನು ನೆಡಲಾಗಿದೆ. ನವರಾತ್ರಿಯ ಈ ದಿನಗಳಂದು ಭಕ್ತ ಸಾಗರವೇ ದೇವಸ್ಥಾನಕ್ಕೆ ಹರಿದುಬರುತ್ತದೆ.
ದೇವಸ್ಥಾನ ಸ್ಥಾಪನೆ: 1905ರಲ್ಲಿ ಕಲ್ಲಿನ ಮೂರ್ತಿಗಳನ್ನಿಟ್ಟು ಪೂಜೆ ಸಲ್ಲಿಸಲಾಗುತ್ತಿತ್ತು. ಬಳಿಕ ಹಕ್ಕಲು ಮರಿಯಮ್ಮ ವಿಗ್ರಹಗಳನ್ನು ಜೈಪುರದಲ್ಲಿ ತಂದು ಸ್ಥಾಪಿಸಲಾಗಿದೆ. ಅಲ್ಲಿಂದ ಆರಂಭವಾದ ಈ ದೇವಸ್ಥಾನ, 2006ರಲ್ಲಿ ಮರುನಿರ್ಮಾಣಗೊಂಡಿದೆ. 2009ರಲ್ಲಿ ನವದುರ್ಗೆಯರ ದೇವಸ್ಥಾನ ಸೇರಿದಂತೆ ಸುಮಾರು 38 ದೇವರ ಮೂರ್ತಿಗಳನ್ನು ಇಲ್ಲಿ ಸ್ಥಾಪಿಸಿ ಪೂಜೆ ಸಲ್ಲಿಸಲಾಗುತ್ತದೆ.