ಅಯೋಧ್ಯೆ ರಾಮ ಮಂದಿರದಲ್ಲಿ ರಾಮ ಮೂರ್ತಿ ಪ್ರತಿಷ್ಠಾಪನೆಗೆ ತಯಾರಿ ಜೋರಾಗಿ ನಡೆದಿದೆ. ಈ ಮಧ್ಯೆ ಟ್ರಸ್ಟ್, ದೇಣಿಗೆ ವಿಷಯದ ಬಗ್ಗೆ ಮಾಹಿತಿ ನೀಡಿದೆ. ರಾಮ ಮಂದಿರ ನಿರ್ಮಾಣಕ್ಕೆ ಐದು ಸಾವಿರ ಕೋಟಿ ದೇಣಿಗೆ ಈಗಾಗಲೇ ಬಂದಿದೆ. ಅದರಲ್ಲಿ ಅತಿ ಹೆಚ್ಚು ದೇಣಿಗೆ ನೀಡಿದ ವ್ಯಕ್ತಿ ಯಾರು ಎಂಬುವುದನ್ನು ಟ್ರಸ್ಟ್ ಬಹಿರಂಗಪಡಿಸಿದೆ.
ಮೊರಾರಿ ಬಾಪು 11.3 ಕೋಟಿ ರೂಪಾಯಿಯನ್ನು ದಾನವಾಗಿ ನೀಡಿದ್ದಾರೆ. ಇಷ್ಟೊಂದು ದಾನ ನೀಡಿದ ಈ ಮೊರಾರಿ ಬಾಪು ಯಾರು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ದೇಶದ ಸುಪ್ರಸಿದ್ಧ ರಾಮಕಥಾ ವಾಚನಕಾರರು ಮೊರಾರಿ ಬಾಪು. ಅವರೊಬ್ಬರು ಆಧ್ಯಾತ್ಮಿಕ ಗುರು. ಭಾರತ ಸೇರಿದಂತೆ ವಿಶ್ವದಾದ್ಯಂತ ರಾಮಕಥೆಯನ್ನು ಆಯೋಜಿಸುತ್ತಾರೆ. ಮೊರಾರಿ ಬಾಪು ಕಥೆ ಹೇಳುವ ಶೈಲಿ ವಿಶೇಷವಾಗಿದೆ. ಅವರ ಕಥೆ ಕೇಳಲು ಸಾವಿರಾರು ಭಕ್ತರು ಸೇರುತ್ತಾರೆ. ವಿದೇಶದಲ್ಲೂ ಅವರ ಅನುಯಾಯಿಗಳ ಸಂಖ್ಯೆ ಸಾಕಷ್ಟಿದೆ.
ಮೊರಾರಿ ಬಾಪು ಸೆಪ್ಟೆಂಬರ್ 25 , 1946 ರಂದು ಜನಿಸಿದರು. ಮೊರಾರಿ ಬಾಪು ಅವರ ಪೂರ್ಣ ಹೆಸರು ಮೊರಾರಿದಾಸ್ ಪ್ರಭುದಾಸ್ ಹರಿಯಾನಿ. ಪ್ರಸ್ತುತ ಮೊರಾರಿ ಬಾಪು, ಗುಜರಾತ್‌ನ ಶ್ರೀ ಚಿತ್ರಕೂಟಧಾಮ್ ಟ್ರಸ್ಟ್‌ನಲ್ಲಿ ವಾಸಿಸುತ್ತಿದ್ದಾರೆ. ಜೊತೆಗೆ ಕಥಾ ಆಯೋಜನೆಗಾಗಿ ದೇಶ – ವಿದೇಶ ಪ್ರವಾಸ ಮಾಡುತ್ತಲೇ ಇರುತ್ತಾರೆ. ಮೊರಾರಿ ಬಾಪು ತಮ್ಮ ಕಥೆಗಳ ಮೂಲಕ ಉತ್ತಮ ಹಣ ಸಂಪಾದಿಸುತ್ತಿದ್ದಾರೆ. ಆದರೆ ಅವರು ಗಳಿಸಿದ ಎಲ್ಲಾ ಹಣವನ್ನು ದಾನ ಮಾಡುತ್ತಾರೆ. ಸರಳ ರೀತಿಯಲ್ಲಿ ಜೀವನ ನಡೆಸುವುದು ಅವರು ನಡೆದು ಬಂದ ಮಾರ್ಗವಾಗಿದೆ. ಮೊರಾರಿ ಬಾಪು ಒಂದು ವರ್ಷದಲ್ಲಿ 300 ಕೋಟಿ ರೂಪಾಯಿಗಿಂತಲೂ ಹೆಚ್ಚು ಹಣವನ್ನು ಸಂಪಾದಿಸುತ್ತಾರೆ.