ಬೆಳಗಾವಿ: ಗಾಂಜಾ ನಶೆಯಲ್ಲಿದ್ದ ಯುವಕರು, ಪ್ರೇಮಿಗಳೆಂದು ತಿಳಿದು ಅಕ್ಕ-ತಮ್ಮನನ್ನು ಶೆಡ್‍ನಲ್ಲಿ ಕೂಡಿ ಹಾಕಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಗರದಲ್ಲಿ ನಡೆದಿದೆ.
With input from Public TV Kannada
ಬೆಳಗಾವಿ ಹೊರವಲಯದ ಯಮನಾಪುರದ ಸಹೋದರ ಹಾಗೂ ಸಹೋದರಿಯ ಮೇಲೆ ಹಲ್ಲೆ ನಡೆದಿದೆ ಎಂದು ತಿಳಿದು ಬಂದಿದೆ. ಕೋಟಿ ಕೆರೆಯ ದಡದಲ್ಲಿ ಅಕ್ಕ-ತಮ್ಮ ಇಬ್ಬರು ಕುಳಿತು ಮಾತಾಡುತ್ತಿದ್ದರು. ಈ ವೇಳೆ ಬಂದ ಕಿಡಿಗೇಡಿಗಳು ಇಬ್ಬರನ್ನು ಎಳೆದೊಯ್ದು ಶೆಡ್‍ನೊಳಗೆ ಕೂಡಿಹಾಕಿ ಹಲ್ಲೆ ನಡೆಸಿದ್ದಾರೆ. ಗಾಂಜಾ ನಶೆಯಲ್ಲಿದ್ದ ಏಳು ಜನ ಮುಸ್ಲಿಂ ಯುವಕರು ಸೇರಿ ಕೃತ್ಯ ಎಸಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಸಹೋದರನ ಜೊತೆಗೆ ಯುವತಿ ಆಗಮಿಸಿದ್ದಳು. ಈ ವೇಳೆ ಸೇವಾ ಕೇಂದ್ರದ ಸಿಬ್ಬಂದಿ ಸರ್ವರ್ ಸಮಸ್ಯೆ ಇದೆ, ಮಧ್ಯಾಹ್ನ 3 ಗಂಟೆಗೆ ಬರುವಂತೆ ತಿಳಿಸಿದ್ದಾರೆ. ಇದರಿಂದ ಅಕ್ಕ- ತಮ್ಮ ಮಧ್ಯಾಹ್ನ 1 ಗಂಟೆಯ ವೇಳೆಗೆ ಕೋಟೆ ಕೆರೆ ದಡದ ಮೇಲೆ ಬಂದು ಕುಳಿತಿದ್ದರು. ಈ ವೇಳೆ ಅಲ್ಲಿಗೆ ಬಂದ ಕಿಡಿಗೇಡಿಗಳು ಮುಸ್ಲಿಂ ಹುಡುಗಿ ಜೊತೆಗೆ ಏಕೆ ಕುಳಿತಿದ್ದೀಯಾ? ಎಂದು ಯುವಕನ ಜೊತೆಗೆ ಜಗಳ ತೆಗೆದಿದ್ದಾರೆ.
ಈ ವೇಳೆ ನಾವು ಪ್ರೇಮಿಗಳಲ್ಲ, ಅಕ್ಕ-ತಮ್ಮ ಎಂದು ಮನವರಿಕೆ ಮಾಡಲು ಯತ್ನಿಸಿದ್ದಾರೆ. ಅಲ್ಲದೇ ಅವರ ಚಿಕ್ಕಪ್ಪನಿಗೆ ಫೋನ್ ಮಾಡಿ ಮನವರಿಕೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಫೋನ್ ಸ್ವಿಚ್ ಆಫ್ ಮಾಡಿ ಕೋಟೆ ಕೆರೆ ಪಕ್ಕದ ಶೆಡ್‍ಗೆ ಎಳೆದೊಯ್ದ ಕೂಡಿ ಹಾಕಿ ಇಬ್ಬರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಸ್ವಲ್ಪ ಸಮಯದ ಬಳಿಕ ಯುವತಿಯ ಚಿಕ್ಕಪ್ಪ ವಾಪಸ್ ಕರೆ ಮಾಡಿದ್ದು, ಈ ವೇಳೆ ಮೊಬೈಲ್ ಸ್ವಿಚ್ ಆಫ್ ಆಗಿದ್ದು ತಿಳಿಯುತ್ತಿದ್ದಂತೆ ಎಪಿಎಂಸಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಕೋಟೆ ಕೆರೆ ಸುತ್ತಲೂ ಅವರ ಚಿಕ್ಕಪ್ಪ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಕಿರಿಚಾಟದ ಶಬ್ಧ ಕೇಳಿ ಶೆಡ್ ಒಳಗೆ ನುಗ್ಗಿ ಇಬ್ಬರನ್ನು ರಕ್ಷಿಸಿದ್ದಾರೆ. ಬಳಿಕ ಇಬ್ಬರನ್ನೂ ಜಿಲ್ಲಾಸ್ಪತ್ರೆಗೆ ಕರೆದೊಯ್ದ ದಾಖಲಿಸಿದ್ದಾರೆ. ಅಕ್ಕ-ತಮ್ಮ ಇಬ್ಬರಿಗೂ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಯುವತಿಯ ತಾಯಿ ಹಾಗೂ ಯುವಕನ ತಾಯಿ ಸ್ವಂತ ಅಕ್ಕ-ತಂಗಿಯರಾಗಿದ್ದು, ಲಮಾಣಿ ಸಮುದಾಯಕ್ಕೆ ಸೇರಿದ್ದ ಯುವತಿಯ ತಾಯಿ ಮುಸ್ಲಿಂ ವ್ಯಕ್ತಿಯೊಂದಿಗೆ ವಿವಾಹವಾಗಿದ್ದರು. 11 ವರ್ಷಗಳ ಹಿಂದೆಯೇ ಯುವತಿಯ ತಂದೆ ಅಕಾಲಿಕ ಸಾವು ಹಿನ್ನೆಲೆಯಲ್ಲಿ ಸಹೋದರಿಯ ಮನೆ ಪಕ್ಕದ ಮನೆಯಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ.
ಈ ಸಂಬಂಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ 17 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಕಿಲ್ಲಾ ಕೆರೆ ನಿವಾಸಿ ಅತೀಕ್ ಹಾಗೂ ಅಸದ್ ಖಾನ್ ಸೇರಿದಂತೆ ಏಳು ಜನ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.