ಉಡುಪಿಯ ಪಾದೂರು ಹಾಗೂ ಮಂಗಳೂರಿನ ಪೆರ್ಮುದೆಯಲ್ಲಿ ಕಚ್ಚಾ ತೈಲದ ಭೂಗತ ಸಂಗ್ರಹಾಗಾರ ನಿರ್ಮಾಣಗೊಂಡ ರೂಪದಲ್ಲಿಯೇ ಮೂರನೇ ಭೂಗತ ಪೆಟ್ರೋಲಿಯಂ ಉತ್ಪನ್ನ ಸಂಗ್ರಹಾಗಾರ ಮಂಗಳೂರಿನಲ್ಲಿ ನಿರ್ಮಾಣ ಗೊಳ್ಳುತ್ತಿದೆ. ಈಗಾಗಲೇ ಶೇ. 85% ಕಾಮಗಾರಿ ಪೂರ್ಣಗೊಂಡಿದೆ.ಇದು ದೇಶದ ಅತೀ ದೊಡ್ಡ ಎಲ್‌ಪಿಜಿ ಅನಿಲ (ಲಿಕ್ವಿಡ್ ಪೆಟ್ರೋಲಿಯಂ ಗ್ಯಾಸ್)ಸಂಗ್ರಹಾಗಾರ ಎನಿಸಿಕೊಳ್ಳಲಿದೆ.
ಮೂಲವರದಿ: ಉದಯವಾಣಿ
ಎಲ್‌ಪಿಜಿ ಭೂಗತ ಸಂಗ್ರಾಹಾಗಾರ ನಿರ್ಮಾಣಕ್ಕೆ 2018ರಲ್ಲಿ ಕೇಂದ್ರ ಒಪ್ಪಿಗೆ ನೀಡಿದ್ದು, ಬಳಿಕ ಒಂದು ವರ್ಷದಲ್ಲಿ ಕಾಮಗಾರಿ ಆರಂಭವಾಗಿದೆ. ಸಮುದ್ರ ಮಧ್ಯದಿಂದ ಭೂಗತ ಸಂಗ್ರಹಾಗಾರಕ್ಕೆ ಗ್ಯಾಸ್ ಪೂರೈಕೆಗೆ ಪೈಪ್‌ಲೈನ್ ಅಳವಡಿಕೆ ಪೂರ್ಣಗೊಂಡಿದೆ. ಭೂಗತ ಸಂಗ್ರಹಾಗಾರದಲ್ಲಿ ಅಗತ್ಯ ಕಟ್ಟಡ ನಿರ್ಮಾಣವೂ ಆಗಿದೆ. ಬೃಹತ್ ಬಂಡೆಕಲ್ಲನ್ನು ಕೊರೆದು ಸುರಂಗ ನಿರ್ಮಿಸಿ 500 ಮೀಟರ್ ಆಳದಲ್ಲಿ ಎಲ್‌ಪಿಜಿ ಸಂಗ್ರಹಾಗಾರ ನಿರ್ಮಿಸಲಾಗಿದ್ದು, ಈಗಾಗಲೇ ಶೇ. 85ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸರಕಾರ ಸ್ವಾಮ್ಯದ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿ. (ಎಚ್‌ಪಿಸಿಎಲ್) ಆಂಧ್ರಪ್ರದೇಶದ ವಿಶಾಖಪಟ್ಟಣದ ಬಳಿಕ ಈಗ ಮಂಗಳೂರಿನಲ್ಲಿ ಭೂಗತ ಗ್ಯಾಸ್ ಸಂಗ್ರಹಾಗಾರ ನಿರ್ಮಿಸುತ್ತಿದೆ. ದೇಶದ ರಕ್ಷಣಾತ್ಮಕ ದೃಷ್ಟಿಯಿಂದ ತುರ್ತು ಸಂದರ್ಭದಲ್ಲಿ ಗ್ಯಾಸ್ ಪೂರೈಕೆಗೆ ನೆರವಾಗಲು ಕೇಂದ್ರ ಸರಕಾರ ಈ ಅನಿಲ ಸಂಗ್ರಹಾಗಾರ ಸ್ಥಾಪಿಸುತ್ತಿದ್ದು, ಡಿಸೆಂಬರ್ ಅಂತ್ಯಕ್ಕೆ ಲೋಕಾರ್ಪಣೆ ಗೊಳ್ಳುವ ನಿರೀಕ್ಷೆಯಿದೆ.
ಮಂಗಳೂರಿನ ವಿಶೇಷ ಆರ್ಥಿಕ ವಲಯ (ಎಂಎಸ್‌ಇಝಡ್) ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಈ ಸಂಗ್ರಹಾಗಾರದ ಸಾಮರ್ಥ್ಯ 80 ಸಾವಿರ ಮೆಟ್ರಿಕ್ ಟನ್. ಯೋಜನೆ ಪೂರ್ಣವಾದ ಬಳಿಕ ನವಮಂಗಳೂರು ಬಂದರು ಸನಿಹದಿಂದ ಎಲ್‌ಪಿಜಿ ಗ್ಯಾಸ್‌ನ್ನು ದೊಡ್ಡ ಹಡಗುಗಳಿಂದ ಪಡೆದು ಪೈಪ್‌ಲೈನ್ ಮೂಲಕ ಭೂಗತ ಸಂಗ್ರಹಾಗಾರಕ್ಕೆ ಸರಬರಾಜು ಮಾಡ ಲಾಗುತ್ತದೆ. ಸುರಂಗ ನಿರ್ಮಾಣ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.
ಮಂಗಳೂರಿನ ಪೆರ್ಮುದೆ ಮತ್ತು ಉಡುಪಿಯ ಪಾದೂರಿನಲ್ಲಿ ಈಗಾಗಲೇ ಭೂಗತ ತೈಲ ಸಂಗ್ರಹಾಗಾರಗಳಿವೆ. ಇದನ್ನು ದೇಶದಲ್ಲಿ ತುರ್ತು ಸನ್ನಿವೇಶಕ್ಕೆ ಬಳಕೆಗಾಗಿ ಮೀಸಲಿಡಲಾಗಿದೆ. ಪೆರ್ಮುದೆಯ ಸಂಗ್ರಹಾಗಾರದ ಸಾಮರ್ಥ್ಯ 1.5 ಮಿಲಿಯ ಮೆ.ಟನ್ ಆಗಿದ್ದು, 1,227 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದು 2016ರಲ್ಲಿ ಕಾರ್ಯಾರಂಭಿಸಿದೆ. ಪಾದೂರಿನ ತೈಲ ಸಂಗ್ರಹಾಗಾರ 2.50 ಮಿ.ಮೆ. ಟನ್ ಸಾಮರ್ಥ್ಯ ಹೊಂದಿದ್ದು, 1,693 ಕೋಟಿ ರೂ.ಗಳಲ್ಲಿ ನಿರ್ಮಿಸಿದ್ದು 2018ರಲ್ಲಿ ಕಾರ್ಯಾರಂಭಿಸಿದೆ.