ಬೆಂಗಳೂರು: ತಂದೆ ಪಡೆದಿದ್ದ 10 ಸಾವಿರ ರೂ. ಬಡ್ಡಿ ಹಣಕ್ಕೆ ಮಗಳನ್ನು ಮನೆ ಕೆಲಸಕ್ಕೆ ಇಟ್ಟುಕೊಂಡು, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ 20 ವರ್ಷ ಜೈಲುಶಿಕ್ಷೆ ವಿಧಿಸಿ ಎಟಿಎಸ್‌ಸಿ 3ನೇ ನ್ಯಾಯಾಲಯ ತೀರ್ಪು ನೀಡಿದೆ.
ದೇವರಜೀವನಹಳ್ಳಿ ನಿವಾಸಿ ವಾಸಿಂ ಖಾನ್ ಅಲಿಯಾಸ್ ಹಸನ್ (32) ಅಪರಾಧಿಗೆ 20 ವರ್ಷ ಜೈಲು ಮತ್ತು 20 ಸಾವಿರ ರೂ. ದಂಡ ವಿಧಿಸಿದೆ. ದೌರ್ಜನ್ಯವನ್ನು ಯಾರಿಗೂ ಹೇಳದಂತೆ ಬೆದರಿಕೆಯೊಡ್ಡಿ ಸಂತ್ರಸ್ತೆ ಮೇಲೆ ಹಲ್ಲೆ ನಡೆಸಿದ್ದ ಅಪರಾಧಿ ಸಹೋದರಿ ತಬರಿನ್ ತಾಜ್ ಅಲಿಯಾಸ್ ತಬ್ಬುಗೆ 1 ಜೈಲುಶಿಕ್ಷೆ ವಿಧಿಸಿ ನ್ಯಾಯಾಧೀಶರಾದ ಇಷ್ರತ್ ಜಹಾನ್ ಅರ ಶಿಕ್ಷೆ ಪ್ರಕಟಿಸಿದ್ದಾರೆ. ಅಲ್ಲದೆ ಸಂತ್ರಸ್ತೆಗೆ 4 ಲಕ್ಷ ರೂ. ಪರಿಹಾರ ನೀಡುವಂತೆ ಸರ್ಕಾರಕ್ಕೆ ಸೂಚಿಸಿದ್ದಾರೆ.
ಪರಿಶಿಷ್ಟ ಜಾತಿಗೆ ಸೇರಿದ ಸಂತ್ರಸ್ತೆ ತಂದೆ, 2019ರಲ್ಲಿ 10 ಸಾವಿರ ರೂ. ಬಡ್ಡಿಗೆಂದು ವಾಸಿಂ ಖಾನ್ ಬಳಿ ಪಡೆದಿದ್ದರು. ಅಸಲು, ಬಡ್ಡಿ ಹಣ ಕೊಡಲು ಸಾಧ್ಯವಾಗಿರಲಿಲ್ಲ. ಸಾಲದ ಹಣ ವಾಪಸ್ ಕೊಡುವಂತೆ ಒತ್ತಾಯ ಮಾಡಿದಾಗ ಪತ್ನಿ ಮತ್ತು ಮಗಳನ್ನು ಬಿಟ್ಟು ತಂದೆ ದೂರವಾಗಿದ್ದ.
ಇದನ್ನೇ ಮುಂದಿಟ್ಟುಕೊಂಡ ಅಪರಾಧಿ, ಸಂತ್ರಸ್ತೆಯ ತಾಯಿಗೆ ನಿಮ್ಮ ಮಗಳನ್ನು ಮನೆ ಕೆಲಸಕ್ಕೆ ಕಳುಹಿಸಿ, ಇಲ್ಲವಾದರೆ ಬಡ್ಡಿಸಮೇತ ಹಣ ಹಿಂತಿರುಗಿಸುವಂತೆ ಒತ್ತಾಯಿಸಿದ್ದ. ದಿಕ್ಕು ತೋಚದ ತಾಯಿ, 13 ವರ್ಷದ ಮಗಳನ್ನು ವಾಸಿಂ ಮನೆಗೆ ಕೆಲಸಕ್ಕೆ ಕಳುಹಿಸಿದ್ದರು.
ಒಂದು ವರ್ಷದಿಂದ ಬಾಲಕಿಯನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ ವಾಸಿಂ, ಮನೆಯಲ್ಲಿ ಯಾರು ಇಲ್ಲದೆ ಇದ್ದಾಗ ಆಕೆಯ ಮೇಲೆ ಅತ್ಯಾಚಾರ ಎಸಗುತ್ತಿದ್ದ. ಜತೆಗೆ ಯಾರಿಗೂ ಹೇಳದಂತೆ ಪ್ರಾಣ ಬೆದರಿಕೆ ಒಡ್ಡಿದ್ದ. ತಬರಿನ್ ತಾಜ್‌ಗೆ ವಿಷಯ ಗೊತ್ತಾದ ಮೇಲೂ ಬಾಲಕಿ ಮೇಲೆ ಹಲ್ಲೆ ನಡೆಸಿ ತನ್ನ ಸಹೋದರನಿಗೆ ಸಾಥ್ ಕೊಟ್ಟಿದ್ದ.
2020ರ ಜನವರಿ 6ರಂದು ಅಪರಾಧಿ ಮನೆಯಿಂದ ತಪ್ಪಿಸಿಕೊಂಡು ಬಂದ ಬಾಲಕಿಯನ್ನು ಮಕ್ಕಳ ಸಹಾಯವಾಣಿ ಸಿಬ್ಬಂದಿ ರಕ್ಷಣೆ ಮಾಡಿದ್ದರು. ಬಾಲಕಿಯರ ಬಾಲ ಮಂದಿರದಲ್ಲಿ ಸಂತ್ರಸ್ತೆಗೆ ಆಶ್ರಯ ಕಲ್ಪಿಸಿದ್ದರು. ದೇವರಜೀವನಹಳ್ಳಿ ಪೊಲೀಸ್ ಠಾಣೆಯ ಅಂದಿನ ಇನ್‌ಸ್ಪೆಕ್ಟರ್ ಪಿ. ರವಿಪ್ರಸಾದ್, ಪ್ರಕರಣ ದಾಖಲಿಸಿಕೊಂಡು ವಾಸಿಂ ಮತ್ತು ತಬರಿನ್ ತಾಜ್‌ನನ್ನು ಬಂಧಿಸಿ, ತನಿಖೆ ಕೈಗೊಂಡು ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು.
ಸರ್ಕಾರಿ ಅಭಿಯೋಜಕಿ ಗೀತಾ ರಾಮಕೃಷ್ಣ ಗೊರವರ, ಸಂತ್ರಸ್ತೆ ಪರವಾಗಿ ವಾದ ಮಂಡಿಸಿದ್ದರು.