ಪ್ರಧಾನಿ ನರೇಂದ್ರ ಮೋದಿ ಅವರ ಲಕ್ಷದ್ವೀಪ ಭೇಟಿ ಬಗ್ಗೆ ಮಾಲ್ಡೀವ್ಸ್ನ ಕಿರಿಯ ಸಚಿವೆ ಮಾರಿಯಂ ಶಿಯುನಾ ಲೇವಡಿ ಮಾಡಿದ ಘಟನೆ ಬೇರೆ ಸ್ವರೂಪ ಪಡೆದುಕೊಂಡಂತಿದೆ. ಈ ಲೇವಡಿ ಭಾರತೀಯರ ಸ್ವಾಭಿಮಾನ ಕೆದಕಿದೆ. ಈ ಬೆಳವಣಿಗೆ ಬೆನ್ನಲ್ಲೇ ಭಾರತೀಯರು ಮಾಲ್ಡೀವ್ಸ್ ಪ್ರವಾಸಕ್ಕೆಂದು ಮಾಡಿದ್ದ 8,000 ಹೋಟೆಲ್ ಬುಕಿಂಗ್ಸ್ ಮತ್ತು 2,500 ಫ್ಲೈಟ್ ಟಿಕೆಟ್ಗಳನ್ನು ರದ್ದು ಮಾಡಿದ್ದಾರೆ. ಮಾಲ್ಡೀವ್ಸ್ ಸಚಿವರ ಅವಹೇಳನಕಾರಿ ಹೇಳಿಕೆ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಬಾಯ್ಕಾಟ್ ಮಾಲ್ಡೀವ್ಸ್ ಎಂಬ ಅಭಿಯಾನ ಶುರುವಾಗಿದೆ.
ಈ ಬಾಯ್ಕಾಟ್ ಟ್ರೆಂಡ್ ಆರಂಭವಾಗುತ್ತಿದ್ದಂತೆಯೇ ಮಾಲ್ಡೀವ್ಸ್ ಸರ್ಕಾರ ಸ್ಪಷ್ಟನೆ ನೀಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವಿದೇಶೀ ನಾಯಕರ ಮೇಲೆ ವ್ಯಕ್ತವಾಗುವ ಅಭಿಪ್ರಾಯಗಳು ಅವರ ವೈಯಕ್ತಿಕವಾದುದಾಗಿರುತ್ತವೆ. ಮಾಲ್ಡೀವ್ಸ್ ಸರ್ಕಾರದ ಅಭಿಪ್ರಾಯ ಆಗಿರುವುದಿಲ್ಲ. ಅವಹೇಳನಕಾರಿ ಹೇಳಿಕೆಗಳನ್ನು ನೀಡುವವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುವುದಿಲ್ಲ, ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ನರೇಂದ್ರ ಮೋದಿ ಕೆಲ ದಿನಗಳ ಹಿಂದೆ ಲಕ್ಷದ್ವೀಪಕ್ಕೆ ಭೇಟಿ ನೀಡಿ ಸ್ನಾರ್ಕೆಲಿಂಗ್ ಇತ್ಯಾದಿ ಚಟುವಟಿಕೆಯಲ್ಲಿ ತೊಡಗಿದ್ದರು. ಒಂದಷ್ಟು ಫೋಟೋಶೂಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿತ್ತು. ಮಾಲ್ಡೀವ್ಸ್ಗೆ ಪರ್ಯಾಯವಾಗಿ ಲಕ್ಷದ್ವೀಪದ ಪ್ರವಾಸೋದ್ಯಮ ಅಭಿವೃದ್ದಿಗೊಳಿಸಲು ಸರ್ಕಾರದ ಗಮನ ಹರಿದಿರಬಹುದು ಎಂಬಂತೆ ಹಲವರು ವ್ಯಾಖ್ಯಾನಿಸಿದ್ದಾರೆ.
ಇದರ ಬೆನ್ನಲ್ಲೇ ಮಾಲ್ಡೀವ್ಸ್ನ ಕೆಲ ಸಚಿವರು ಸೇರಿದಂತೆ ಬಹಳ ಮಂದಿ ನರೇಂದ್ರ ಮೋದಿಯ ಲಕ್ಷದ್ವೀಪ ಭೇಟಿ ಬಗ್ಗೆ ಅವಹೇಳನ ಮಾಡಿದ್ದಾರೆ. ಮಾಲ್ಡೀವ್ಸ್ನ ಯುವ ಸಬಲೀಕರಣದ ಕಿರಿಯ ಸಚಿವೆ ಮಾರಿಯಮ್ ಶುಯುನಾ ಅವರು ನರೇಂದ್ರ ಮೋದಿಯನ್ನು ಕ್ಲೌನ್ (ವಿದೂಷಕ) ಎಂದು ಜರೆದಿದ್ದು ಮಾತ್ರವಲ್ಲ ಇಸ್ರೇಲ್ನ ಕೈಗೊಂಬೆ ಎಂಬಂತೆ ಟೀಕಿಸಿದ್ದಾರೆ.
ಅಲ್ಲಿನ ಒಬ್ಬ ಸಂಸದ ಜಾಹೀದ್ ರಮೀಜ್ ಅವರು ಲಕ್ಷದ್ವೀಪವನ್ನು ಕೊಳೆಗೇರಿಗೆ ಹೋಲಿಸಿದ್ದಾರೆ. ‘ಲಕ್ಷದ್ವೀಪದ ಮೂಲಕ ಮಾಲ್ಡೀವ್ಸ್ ಎದುರು ಪ್ರವಾಸೋದ್ಯಮಕ್ಕೆ ಸ್ಪರ್ಧಿಸುತ್ತೇನೆಂದು ಭಾವಿಸುವುದು ಭ್ರಮೆ. ನಾವು ಕೊಡುವಂತಹ ಸೇವೆ ಅವರಿಗೆ ಕೊಡಲು ಆಗುತ್ತದಾ? ಇಷ್ಟು ಸ್ವಚ್ಛತೆ ಅವರಿಂದ ಸಾಧ್ಯವಾ? ರೂಮ್ಗಳಲ್ಲಿ ಖಾಯಂ ಆಗಿ ದುರ್ವಾಸನೆ ಇರುತ್ತದೆ,’ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ರಮೀಜ್ ಬರೆದಿದ್ದಾರೆ
ಮಾಲ್ಡೀವ್ಸ್ಗೆ ಪ್ರವಾಸೋದ್ಯಮ ಪ್ರಮುಖ ಆದಾಯ ಮೂಲ
ಮಾಲ್ಡೀವ್ಸ್ ದೇಶಕ್ಕೆ ಅದರ ಪ್ರವಾಸೋದ್ಯಮ ಪ್ರಮುಖ ಆದಾಯ ಮೂಲವಾಗಿದೆ. 2023ರ ಏಪ್ರಿಲ್ನಿಂದ ಜೂನ್ವರೆಗಿನ ಅವಧಿಯಲ್ಲಿ ಪ್ರವಾಸೋದ್ಯಮದಿಂದ ಬಂದ ಆದಾಯ 883.4 ಮಿಲಿಯನ್ ಡಾಲರ್ ಇದೆ. ಎಪತ್ತರ ದೇಶದಲ್ಲಿ ಮೂರು ಇದ್ದ ರೆಸಾರ್ಟ್ಗಳ ಸಂಖ್ಯೆ ಈಗ 170ಕ್ಕೆ ಏರಿದೆ. ಅಲ್ಲಿನ ರೆಸಾರ್ಟ್ಗಳನ್ನು ಬಹಳ ವ್ಯವಸ್ಥಿತವಾಗಿ ರೂಪಿಸಲಾಗಿದೆ. ಮಾಲ್ಡೀವ್ಸ್ನ ಜಿಡಿಪಿಗೆ ಪ್ರವಾಸೋದ್ಯಮದಿಂದ ಬರುವ ಕೊಡುಗೆ ಶೇ. 17ರಷ್ಟಿದೆ. ಸರ್ಕಾರ ಶೇ. 40ರಷ್ಟು ಆದಾಯ ತಂದುಕೊಡುತ್ತದೆ. ಸರ್ಕಾರ ಗಳಿಸುವ ಫಾರೀನ್ ಕರೆನ್ಸಿ ಆಸ್ತಿಯಲ್ಲಿ ಪ್ರವಾಸೋದ್ಯಮದಿಂದಲೇ ಶೇ. 70ರಷ್ಟು ಬರುತ್ತದೆ.
ಮಾಲ್ಡೀವ್ಸ್ನ ಪ್ರವಾಸಿಗರಲ್ಲಿ ಚೀನೀಯರ ಸಂಖ್ಯೆ ಹೆಚ್ಚು. ಅವರನ್ನು ಬಿಟ್ಟರೆ ಭಾರತೀಯ ಪ್ರವಾಸಿಗರೇ ಹೆಚ್ಚು ಬರುತ್ತಾರೆ. ಪ್ರವಾಸೋದ್ಯಮಕ್ಕೆ ಬರುವ ಆದಾಯದಲ್ಲಿ ಭಾರತೀಯರ ಕೊಡುಗೆ ಶೇ. 10ರಷ್ಟು ಇದೆ. ಹೀಗಾಗಿ, ಭಾರತೀಯರು ಬಾಯ್ಕಾಟ್ ಮಾಡಿದರೆ ಮಾಲ್ಡೀವ್ಸ್ಗೆ ಒಂದಷ್ಟು ನಷ್ಟವಂತೂ ಖಚಿತ.