ಪೇಯಿಂಗ್ ಗೆಸ್ಟ್ (ಪಿ.ಜಿ) ಕಟ್ಟಡದ ಮಾಲೀಕರೊಬ್ಬರಿಗೆ ಮತ್ತು ಬರುವ ಔಷಧಿ ಬೆರೆಸಿದ್ದ ಮಜ್ಜಿಗೆ ಕುಡಿಸಿ ಚಿನ್ನಾಭರಣ ಕದ್ದಿದ್ದ ಆರೋಪಿ ರಾಜೇಶ್ವರಿ (27) ಎಂಬಾಕೆಯನ್ನು ಹಲಸೂರು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ‘ಜೀವನ್ ಬಿಮಾನಗರ ಬಳಿಯ ಮಲ್ಲೇಶ್ ಪಾಳ್ಯದ ರಾಜೇಶ್ವರಿ, ಪೇಯಿಂಗ್ ಗೆಸ್ಟ್ ಕಟ್ಟಡದಲ್ಲಿಯೇ ಅಡುಗೆ ಕೆಲಸ ಮಾಡಿಕೊಂಡಿದ್ದಳು. ಅದೇ ಕಟ್ಟಡದ ಮಾಲೀಕರಾಗಿದ್ದ ಮಹಿಳೆಯ ಚಿನ್ನಾಭರಣ ಕಳವು ಮಾಡಿದ್ದಾಳೆ. ಈ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ರಾಜೇಶ್ವರಿ ಅವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಪತಿಯಿಂದ ದೂರವಾಗಿದ್ದ ರಾಜೇಶ್ವರಿ, ಅಡುಗೆ ಕೆಲಸಕ್ಕೆ ಸೇರಿಕೊಂಡಿದ್ದರು. ಪೇಯಿಂಗ್ ಗೆಸ್ಟ್ ಕಟ್ಟಡದ ಮಾಲೀಕರಾದ ಮಹಿಳೆ ಸಹ ರಾಜೇಶ್ವರಿ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು’ ಎಂದು ಪೊಲೀಸರು ತಿಳಿಸಿದರು.
‘ಮಾಲೀಕರಾದ ಮಹಿಳೆ, ಇತ್ತೀಚೆಗೆ ಸುಸ್ತಾಗಿ ಮಲಗಿದ್ದರು. ಅವರ ಕೈ- ಕಾಲು ಒತ್ತಿದ್ದ ಆರೋಪಿ, ಕುಡಿಯಲು ಮಜ್ಜಿಗೆ ಕೊಟ್ಟಿದ್ದರು. ಮಜ್ಜಿಗೆ ಕುಡಿಯುತ್ತಿದ್ದಂತೆ ಮಹಿಳೆ, ಪ್ರಜ್ಞೆ ತಪ್ಪಿದ್ದರು. ನಂತರ, ಆರೋಪಿ ಚಿನ್ನಾಭರಣ ಕದ್ದುಕೊಂಡು ಮಳಿಗೆಯೊಂದಕ್ಕೆ ಹೋಗಿದ್ದರು. ಆಭರಣಗಳನ್ನು ಮಾರಿ, ಹಣ ಪಡೆದಿದ್ದರು. ಪುನಃ, ಪೇಯಿಂಗ್ ಗೆಸ್ಟ್ ಕಟ್ಟಡಕ್ಕೆ ಬಂದಿದ್ದರು.’
‘ಕೆಲ ಹೊತ್ತಿನ ನಂತರ ಮಹಿಳೆ ಎಚ್ಚರಗೊಂಡಿದ್ದರು. ಚಿನ್ನಾಭರಣ ಕಳ್ಳತನವಾಗಿದ್ದು ಗೊತ್ತಾಗಿತ್ತು. ರಾಜೇಶ್ವರಿ ಹಾಗೂ ಇತರರನ್ನು ವಿಚಾರಿಸಿದಾಗ, ತಾವು ಕದ್ದಿಲ್ಲವೆಂದು ಹೇಳಿದ್ದರು. ಬಳಿಕವೇ ಅವರು ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡಾಗ, ರಾಜೇಶ್ವರಿ ಮೇಲೆ ಅನುಮಾನ ಬಂದಿತ್ತು. ವಶಕ್ಕೆ ಪಡೆದು ವಿಚಾರಿಸಿದಾಗ, ತಪ್ಪೊಪ್ಪಿಕೊಂಡರು’ ಎಂದು ಹೇಳಿದರು.