ಬೆಂಗಳೂರು ನಗರದ ‘ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ದ ಟರ್ಮಿನಲ್-2, ವಿಶ್ವದ ಅತ್ಯಂತ ಸುಂದರ ವಿಮಾನ ನಿಲ್ದಾಣಗಳಲ್ಲಿ ಒಂದೆಂಬ ಹಿರಿಮೆಗೆ ಪಾತ್ರವಾಗಿದೆ. ಈ ಮೂಲಕ ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನೆಸ್ಕೋ ನೀಡುವ ಪ್ರಿಕ್ಸ್ ವರ್ಸೈಲ್ಸ್ ಗೌರವಕ್ಕೆ ಪಾತ್ರವಾಗಿದೆ.
ವಿಶೇಷವೆಂದರೆ ಈ ಗೌರವಕ್ಕೆ ಪಾತ್ರವಾದ ಮೊದಲ ನಿಲ್ದಾಣ ಎಂಬ ಹಿರಿಮೆಗೆ ಬೆಂಗಳೂರು ವಿಮಾನ ನಿಲ್ದಾಣ ಪಾತ್ರವಾಗಿದೆ. ಒಳಾಂಗಣ ವಿನ್ಯಾಸಕ್ಕಾಗಿ ಬೆಂಗಳೂರು ಏರ್‌ಪೋರ್ಟ್‌ನ ಟರ್ಮಿನಲ್- 2ಕ್ಕೆ ಈ ಗೌರವ ಸಂದಿದೆ.
ಟರ್ಮಿನಲ್-2 ವಿಶೇಷತೆ ಏನು?: 2,55,661 ಚದರ ಮೀಟರ್ ವಿಸ್ತೀರ್ಣದಲ್ಲಿರುವ ಟರ್ಮಿನಲ್-2 ಅನ್ನು 4 ಬೃಹತ್ ಅಡಿಪಾಯದ ಕಂಬಗಳ ಮೇಲೆ ನಿರ್ಮಾಣವಾಗಿದೆ. ಇಲ್ಲಿನ ಉದ್ಯಾನ ಬಹು ಆಕರ್ಷಣೀಯವಾಗಿದ್ದು, ಇಲ್ಲಿ ಪರಿಸರ ಮತ್ತು ಕರ್ನಾಟಕದ ಶ್ರೀಮಂತ ಪರಂಪರೆ, ಸಂಸ್ಕೃತಿ, ಆಚರಣೆಗಳನ್ನು ಕಾಣಬಹುದಾಗಿದೆ. ಈ ಟರ್ಮಿನಲ್-2ನ ಮೊದಲ ಹಂತವು ನ.11, 2022ರಂದು ಉದ್ಘಾಟನೆಯಾಗಿದೆ. ಇದು ವರ್ಷಕ್ಕೆ 2.5 ಕೋಟಿ ಪ್ರಯಾಣಿಕರನ್ನು ನಿರ್ವಹಿಸುತ್ತದೆ.