ಉಡುಪಿಯಲ್ಲಿ ಉತ್ತರ ಭಾರತದ ಕಿಲಾಡಿ ಕಳ್ಳರ ಗ್ಯಾಂಗ್ ಹೋಲುವ ತಂಡವೊಂದು ಹುಟ್ಟಿಕೊಂಡಿದೆ. ಕಳ್ಳರ ಗ್ಯಾಂಗ್ ಮೈಗೆ ಎಣ್ಣೆ, ಗ್ರೀಸ್ ಹಚ್ಚಿಕೊಂಡು ಬಂದು ಲಕ್ಷಾಂತರ ರೂ. ಹಣ ಕದ್ದು ಪರಾರಿಯಾಗಿದೆ.
ನಗರದ ಸಂತಕಟ್ಟೆಯಲ್ಲಿನ ಬೇಕರಿ ಒಂದರ ಮಾಲೀಕರ ಮನೆಯಲ್ಲಿ ಕಳ್ಳತನ ಮಾಡುವಾಗ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಕಳ್ಳರು ಕೇವಲ ಚಡ್ಡಿಯನ್ನು ಹಾಕಿಕೊಂಡು, ಮೈ ತುಂಬಾ ಎಣ್ಣೆ ಹಚ್ಚಿಕೊಳ್ಳುತ್ತಿರುವ ದೃಶ್ಯಗಳು ಲಭ್ಯವಾಗಿದೆ.
ಮನೆಮಂದಿ ನಿದ್ದೆಯಲ್ಲಿರುವಾಗ ಬಾಗಿಲನ್ನು ಒಡೆದು ಒಳಪ್ರವೇಶಿಸಿದ ಕಳ್ಳರು 2.5 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿಯನ್ನು ಕದ್ದಿದ್ದಾರೆ. ಇದರ ಆಧಾರದಲ್ಲಿ ಉಡುಪಿಯಲ್ಲೊಂದು ನಟೋರಿಯಸ್ ಗ್ಯಾಂಗ್ ಸಕ್ರಿಯವಾಗಿರುವುದು ಖಚಿತಗೊಂಡಿದೆ.
ನಗರದಲ್ಲಿ ನಡೆದ ಮನೆಗಳ್ಳತನ ಪ್ರಕರಣದಲ್ಲಿ ಹಲವಾರು ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ತನಿಖೆ ಮಾಡುತ್ತಿದ್ದಾರೆ. ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಪೊಲೀಸ್ ಗಸ್ತು ಹೆಚ್ಚಿಸಬೇಕು ಎಂಬ ಒತ್ತಾಯ ಜನರಿಂದ ಕೇಳಿಬಂದಿದೆ.