Wednesday, June 19, 2024

ಕನ್ನಡ ಬೆಳ್ಳಿತೆರೆಯಲ್ಲಿ ಮಿನುಗಿದ ಅಭಿಜಾತ ಕಲಾವಿದೆ ಲೀಲಾವತಿ ಇನ್ನಿಲ್ಲ

ಸ್ಯಾಂಡಲ್​ವುಡ್​​ ಹಿರಿಯ ನಟಿ ಲೀಲಾವತಿ ಇಂದು ಕೊನೆಯುಸಿರೆಳೆದಿದ್ದಾರೆ. 85 ವರ್ಷ ವಯಸ್ಸಿನ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದು ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಲೀಲಾವತಿ ಅವರ ಮೂಲ ಹೆಸರು ಲೀಲಾ ಕಿರಣ್. 1938ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದರು. 6 ವರ್ಷವಿದ್ದಾಗಲೇ ಪೋಷಕರನ್ನ ಕಳೆದುಕೊಂಡಿದ್ದರು. ನಾಟಕ, ರಂಗಭೂಮಿ ಬಗ್ಗೆ ಚಿಕ್ಕವಯಸ್ಸಿನಲ್ಲೇ ಆಸಕ್ತಿ ಹೊಂದಿದ್ದ ಅವರು, ಮೈಸೂರಿನ ರಂಗಭೂಮಿಯಲ್ಲಿ ವೃತ್ತಿಜೀವನ ಆರಂಭಿಸಿದರು.

ಲೀಲಾವತಿಯವರು ವೃತ್ತಿರಂಗಭೂಮಿಯಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುವ ಮುನ್ನ ಕೆಲವೆಡೆ ಮನೆ ಕೆಲಸವನ್ನೂ ಅವರು ನಿರ್ವಹಿಸಿದ್ದರು. ಇಂತಹ ಕಷ್ಟಗಳ ಜೊತೆಗೆ 1949ರಲ್ಲಿ ಶಂಕರ್ ಸಿಂಗ್ ಅವರ ‘ನಾಗಕನ್ನಿಕ’ ಚಿತ್ರದಲ್ಲಿ ಸಖಿಯ ಪಾತ್ರದ ಮುಖಾಂತರ ಕನ್ನಡ ಚಿತ್ರರಂಗ ಪ್ರವೇಶಿಸಿದರು.

ಸುಬ್ಬಯ್ಯ ನಾಯ್ಡು ಅವರ ‘ಶ್ರೀ ಸಾಹಿತ್ಯ ಸಾಮ್ರಾಜ್ಯ ಡ್ರಾಮಾ ಕಂಪನಿ’ಯಲ್ಲಿ ರಂಗಭೂಮಿ ಕಲಾವಿದೆಯಾಗಿದ್ದ ಲೀಲಾವತಿಯವರು ಕಯಾದುವಿನ ಸಖಿಯಾಗಿ ಅಭಿನಯಿಸಿದ್ದರು. ಬಳಿಕ ಮಹಾಲಿಂಗ ಭಾಗವತರ ನಾಟಕ ಸಂಸ್ಥೆಯನ್ನು ಸೇರಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದರು. ಸುಬ್ಬಯ್ಯ ನಾಯ್ಡು ಅವರ ‘ಭಕ್ತ ಪ್ರಹ್ಲಾದ’ದಲ್ಲಿ ಕೂಡಾ ಕಾಣಿಸಿಕೊಂಡರು.

ಲೀಲಾವತಿಯವರು ಆರಂಭಿಕ ದಿನಗಳಲ್ಲಿ ಹಲವಾರು ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ಅಭಿನಯಿಸಿದರು. 1958ರಲ್ಲಿ ಬಂದ ‘ಮಾಂಗಲ್ಯ ಯೋಗ’ ಸಿನಿಮಾ ಅವರು ನಾಯಕಿಯಾಗಿ ಅಭಿನಯಿಸಿದ ಮೊದಲ ಚಿತ್ರವಾಗಿದೆ.

ರಾಜ್ ಕುಮಾರ್ ಅವರೊಂದಿಗೆ ರಣಧೀರ ಕಂಠೀರವ ಸಿನಿಮಾದಲ್ಲಿ ಮೊದಲು ನಟಿಸಿದರು. ರಾಣಿ ಹೊನ್ನಮ್ಮ ಚಿತ್ರದ ಯಶಸ್ಸಿನ ನಂತರ ರಾಜ್ ಕುಮಾರ್ ಮತ್ತು ಲೀಲಾವತಿ ಅವರ ಜೋಡಿ ಜನಪ್ರಿಯವಾಯಿತು.

ಸಂತ ತುಕಾರಾಂ, ಕಣ್ತೆರೆದು ನೋಡು, ಕೈವಾರ ಮಹಾತ್ಮೆ, ಗಾಳಿ ಗೋಪುರ, ಕನ್ಯಾರತ್ನ, ಕುಲವಧು, ವೀರ ಕೇಸರಿ, ಮನ ಮೆಚ್ಚಿದ ಮಡದಿ ಹೀಗೆ ಹಲವಾರು ಚಿತ್ರಗಳ ನಾಯಕಿಯಾದರು. ಕೆಲಚಿತ್ರಗಳಲ್ಲಿ ನಾಯಕ ನಟರಿಗಿಂತ ಹೆಚ್ಚಿನ ಸಂಭಾವನೆ ಪಡೆಯುವ ನಾಯಕಿಯಾಗಿ ಗುರುತಿಸಿಕೊಂಡಿದ್ದರು.

ತಮಿಳು, ತೆಲುಗು, ಮಲೆಯಾಳಂ ಮತ್ತು ಕನ್ನಡ ಸೇರಿ 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಲೀಲಾವತಿ ನಿರ್ಮಾಪಕಿಯಾಗಿ ಕೂಡ ಹಲವು ಚಿತ್ರಗಳನ್ನ ನಿರ್ಮಿಸಿದ್ದಾರೆ. 2006ರಲ್ಲಿ ಬಂದ ಕನ್ನಡದ ಕಂದ ಸೇರಿದಂತೆ 8ಕ್ಕೂ ಹೆಚ್ಚು ಚಿತ್ರಗಳ ನಿರ್ಮಾಣ ಮಾಡಿದ್ದಾರೆ.

ಲೀಲಾವತಿಯವರು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 400ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 50ಕ್ಕೂ ಹೆಚ್ಚು ವರ್ಷಗಳ ಕಾಲ ಚಿತ್ರರಂಗದಲ್ಲಿ ತಾರೆಯಾಗಿ ಮೆರೆದಿದ್ದಾರೆ. ಉದಯ್ ಕುಮಾರ್, ಶಿವಾಜಿ ಗಣೇಶನ್, ಎನ್ಟಿಆರ್, ಕಮಲ್ ಹಾಸನ್, ವಿಷ್ಣುವರ್ಧನ್, ಜೆಮಿನಿ ಗಣೇಶನ್, ರಜನಿಕಾಂತ್, ಶಂಕರ್ ನಾಗ್, ಅನಂತ್ ನಾಗ್ ಸೇರಿ ಹಲವು ನಟರ ಜೊತೆ ನಟಿಸಿದ್ದಾರೆ.

ಲೀಲಾವತಿ ಅವರ ನಿಧನಕ್ಕೆ‌ ಚಂದನವನವೇ ಮರುಗಿದೆ.‌ ರಾಜಕೀಯ, ಚಿತ್ರರಂಗ ಹೀಗೆ ವಿವಿಧ ವಲಯಗಳ ಧುರೀಣರು ಸಂತಾಪ ಸೂಚಿಸಿದ್ದಾರೆ.

Related Articles

Latest Articles