Monday, October 14, 2024

ಕಡಬ ಆಸಿಡ್ ದಾಳಿ | ಎರಡು ವಾರಗಳ ಬಳಿಕ ಸಂತ್ರಸ್ತರಿಬ್ಬರಿಗೆ ಪ್ಲಾಸ್ಟಿಕ್‌ ಸರ್ಜರಿ – ಡಾ. ನಾಗಲಕ್ಷ್ಮಿ ಚೌಧರಿ

ದಕ್ಷಿಣ ಕನ್ನಡ: ಆಸಿಡ್ ದಾಳಿಗೊಳಗಾದ ಕಡಬ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿನಿಯರಲ್ಲಿ ಒಬ್ಬಾಕೆಗೆ ಶೇ 20ರಷ್ಟು, ಮತ್ತೊಬ್ಬ ವಿದ್ಯಾರ್ಥಿನಿಗೆ ಶೇ 12ರಷ್ಟು ಹಾಗೂ ಮತ್ತೊಬ್ಬ ವಿದ್ಯಾರ್ಥಿನಿಗೆ ಶೇ 10ರಷ್ಟು ಸುಟ್ಟ ಗಾಯಗಳಾಗಿವೆ. ಅವರಲ್ಲಿ ಇಬ್ಬರಿಗೆ ಪ್ಲಾಸ್ಟಿಕ್‌ ಸರ್ಜರಿಯ ಅಗತ್ಯವಿದೆ’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ತಿಳಿಸಿದ್ದಾರೆ.

ಮೂಲ ವರದಿ: ಪ್ರಜಾವಾಣಿ

ಮಂಗಳೂರಿನ ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತ ವಿದ್ಯಾರ್ಥಿನಿಯರನ್ನು ಮಂಗಳವಾರ ಭೇಟಿ ಮಾಡಿ ಸಾಂತ್ವನ ಹೇಳಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಆಸಿಡ್ ದಾಳಿಗೆ ಒಳಗಾದ ಮೂವರೂ ಆರೋಗ್ಯವಾಗಿದ್ದಾರೆ. ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ.ದಿನೇಶ್‌ ಅವರ ಜೊತೆಗೂ ಮಾತನಾಡಿದ್ದೇನೆ. ಗಾಯದ ತೀವ್ರತೆ ನೋಡಿಕೊಂಡು ವಿದ್ಯಾರ್ಥಿನಿಯರಿಗೆ ಚಿಕಿತ್ಸೆ ಒದಗಿಸಲಾಗುತ್ತಿದೆ. ಚರ್ಮದ ಎಷ್ಟು ಒಳಗಡೆ ಆಯಸಿಡ್‌ ಹೋಗಿದೆ ಎಂಬುದನ್ನು ಆಧರಿಸಿ ಇಬ್ಬರು ವಿದ್ಯಾರ್ಥಿನಿಯರಿಗೆ ಒಂದು ವಾರಗಳ ಬಳಿಕ ಪ್ಲಾಸ್ಟಿಕ್ ಸರ್ಜರಿ ಮಾಡಬೇಕಾಗುತ್ತದೆ. ಮತ್ತೊಬ್ಬಾಕೆಯ ಗಾಯದ ವಾಸಿಯಾಗುವಿಕೆ ಆಧರಿಸಿ ಪ್ಲಾಸ್ಟಿಕ್ ಸರ್ಜರಿ ಬೇಕೋ ಬೇಡವೋ ಎಂಬ ಬಗ್ಗೆ ವೈದ್ಯರು ನಿರ್ಧರಿಸಲಿದ್ದಾರೆ’ ಎಂದರು.

‘ಮೂವರು ವಿದ್ಯಾರ್ಥಿಗಳಲ್ಲೂ ಮನೋಸ್ಥೈರ್ಯವಿದೆ. ಆದರೆ, ಪರೀಕ್ಷೆ ಬಗ್ಗೆ ಆತಂಕಗೊಂಡಿದ್ದಾರೆ. ಮಾರ್ಚ್‌ 1ರಂದು ಬರೆದಿರುವ ಕನ್ನಡ ಪರೀಕ್ಷೆಯನ್ನು ಮತ್ತೊಮ್ಮೆ ಬರೆಯಬೇಕಾ ಎಂದು ಪ್ರಶ್ನಿಸಿದರು‌.

ಪರೀಕ್ಷೆ ಬಗ್ಗೆ ಭಯ ಬೇಡ ಎಂದು ಧೈರ್ಯ ತುಂಬಿದ್ದೇನೆ. ಅವರ ತಾಯಂದಿರನ್ನೂ ಭೇಟಿ ಮಾಡಿ ಧೈರ್ಯ ತುಂಬಿದ್ದೇನೆ. ಪ್ರಾಥಮಿಕ ಶಿಕ್ಷಣ ಸಚಿವರನ್ನು ಭೇಟಿಯಾಗುತ್ತೇನೆ. ಪಿ.ಯು. ಪರೀಕ್ಷೆ ಮತ್ತು ಸಿಇಟಿ ಬರೆಯಲು ತೊಂದರೆ ಆಗದಂತೆ ಕ್ರಮಕೈಗೊಳ್ಳುವ ಬಗ್ಗೆ ಚರ್ಚಿಸುತ್ತೇನೆ’ ಎಂದರು.

‘ಸಂತ್ರಸ್ತೆಯರಿಗೆ ತಕ್ಷಣ ತಲಾ ₹ 4 ಲಕ್ಷ ಪರಿಹಾರವನ್ನು ಸರ್ಕಾರ ಬಿಡುಗಡೆ ಮಾಡಲಿದೆ. ಅವರ ಚಹರೆಯನ್ನು ಮುಂಚಿನಂತೆ ಮಾಡಲು ಪ್ಲಾಸ್ಟಿಕ್‌ ಸರ್ಜರಿಗೆ ₹20 ಲಕ್ಷದಷ್ಟು ಪರಿಹಾರವನ್ನು ನೀಡಲಾಗುತ್ತದೆ. ಆಯಸಿಡ್ ದಾಳಿಗೆ ಒಳಗಾದ ಮಹಿಳೆ ಸ್ವ-ಉದ್ಯೋಗ ಆರಂಭಿಸಲು ಸರ್ಕಾರದಿಂದ ₹ 5 ಲಕ್ಷದವರೆಗೆ ಸಹಾಯಧನ ಒದಗಿಸಲೂ ಅವಕಾಶವಿದೆ. ಇಂತಹ ಸಂತ್ರಸ್ತ ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ಸಾಗಿಸಲು ನೀಡುವ ಮಾಸಾಶನದ ಮೊತ್ತವನ್ನು ₹ 3 ಸಾವಿರದಿಂದ ₹ 10ಸಾವಿರಕ್ಕೆ ಹೆಚ್ಚಿಸಲಾಗಿದೆ. ಪೊಲೀಸ್ ಇಲಾಖೆಯೂ ಸೇರಿದಂತೆ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವ ಮೂಲ ವಿದ್ಯಾರ್ಥಿನಿಯರಿಗೆ ಎಲ್ಲ ರೀತಿಯ ನೆರವು ಒದಗಿಸಲು ಆಯೋಗವು ಪ್ರಯತ್ನಿಸಲಿದೆ’ ಎಂದು ಹೇಳಿದರು.

Related Articles

Latest Articles