ಕ್ರಿಕೆಟ್ ಆಟಗಾರ ಕೆಎಲ್ ರಾಹುಲ್ ಬಾಲಕಿಯ ಶಾಲಾ ಶುಲ್ಕ ಪಾವತಿಸಿ ಹೃದಯವಂತಿಕೆ ಮೆರೆದಿದ್ದಾರೆ. ಧಾರವಾಡ ತಾಲೂಕಿನ ತಡಸಿನಕೊಪ್ಪ ಗ್ರಾಮದ ಗ್ಲೋಬಲ್ ಎಕ್ಸಲೆನ್ಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಶ್ರುತಿ ಕುಲಾವಿ ಅವರ ಶುಲ್ಕ 21 ಸಾವಿರವನ್ನು ಕೆ.ಎಲ್. ರಾಹುಲ್ ನೀಡಿದ್ದಾರೆ. ಶಾಲೆಯ ಬ್ಯಾಂಕ್ ಖಾತೆಗೆ ಶನಿವಾರ ಹಣ ಜಮೆಯಾಗಿದೆ.
ಹುಬ್ಬಳ್ಳಿಯ ಸಾಮಾಜಿಕ ಕಾರ್ಯಕರ್ತ ಮಂಜುನಾಥ ಹೆಬಸೂರು ಅವರು ಈ ಹಿಂದೆ ವಿದ್ಯಾರ್ಥಿಯೊಬ್ಬನಿಗೆ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಪ್ರವೇಶ ಪಡೆಯಲು ರಾಹುಲ್ ಅವರಿಂದ ಆರ್ಥಿಕ ನೆರವು ಕೊಡಿಸಿದ್ದರು.
ಅದನ್ನು ಅರಿತ ಶ್ರುತಿ ಕುಟುಂಬದವರು ಮಂಜುನಾಥ ಅವರನ್ನು ಸಂಪರ್ಕಿಸಿ, ನೆರವು ಕೋರಿದ್ದರು. ಮಂಜುನಾಥ್ ತಮ್ಮ ಸ್ನೇಹಿತನ ಮೂಲಕ ರಾಹುಲ್ ಅವರನ್ನು ಸಂಪರ್ಕಿಸಿ ನೆರವು ಕೊಡಿಸಿದ್ದಾರೆ.
ಶ್ರುತಿ ಅವರ ತಂದೆ ಹನುಮಂತಪ್ಪ ಕುಲಾವಿ ಕಿರಾಣಿ, ಡಬರಿ ಅಂಗಡಿ ನಡೆಸುತ್ತಾರೆ. ಸುಡುಗಾಡು ಸಿದ್ದರ ಜನಾಂಗದ ಹನುಮಂತಪ್ಪ ಅವರಿಗೆ ಪುತ್ರ, ಮೂರು ಪುತ್ರಿಯರು ಇದ್ದಾರೆ.