ಬೆಂಗಳೂರು: ಇಬ್ಬರು ಗೆಳತಿಯರು ತಮ್ಮ ಮುದ್ದಿನ ಗೆಳೆಯನ ಪ್ರಾಣವನ್ನೇ ಬಲಿತೆಗೆದುಕೊಂಡ ಘಟನೆ ನಡೆದಿದೆ. ‘ಬಾಯ್‌ಫ್ರೆಂಡ್’ ಜೀವನ ಅಂತ್ಯಗೊಳಿಸಿದ ನಂತರ ಇಬ್ಬರು ಮಹಿಳೆಯರ ವಿರುದ್ಧ ಆತ್ಮಹತ್ಯೆ ಪ್ರಚೋದನೆ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಮೃತ ಯುವಕನನ್ನು ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಸಂತೋಷ್ ಎಂದು ಗುರುತಿಸಲಾಗಿದೆ. 28 ವರ್ಷದ ಸಂತೋಷ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಸಂತೋಷ ಅವರು ಅಕ್ಟೋಬರ್ 3 ರಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಸಂತೋಷ ಆತ್ಮಹತ್ಯೆಗೆ ಅವರ ಕೆಲಸದ ಸ್ಥಳದ ಇಬ್ಬರು ಮಹಿಳೆಯರು ಕಾರಣ ಎಂದು ಸಂತೋಷ್ ಅವರ ಕುಟುಂಬ ಆರೋಪಿಸಿದೆ.
ಕೆಲವು ತಿಂಗಳ ಹಿಂದೆ ಸಂತೋಷ್ ಅವರು ತನ್ನ ಗೆಳತಿಯೊಂದಿಗೆ ಬೇರೆಯಾಗಿದ್ದರು. ಬಳಿಕ ಸಂತೋಷ್ ತನ್ನ ಕೆಲಸದ ಸ್ಥಳದ ಮತ್ತೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದರು. ತರುವಾಯ ಸಂತೋಷ್ ಅದೇ ಕೆಲಸದ ಸ್ಥಳದಲ್ಲಿ ಇನ್ನೊಬ್ಬ ಮಹಿಳೆಗೆ ಹತ್ತಿರವಾಗಿದ್ದರು. ಇದು ಅವನ ಮಾಜಿ ಗೆಳತಿಯನ್ನು ಕೋಪಗೊಳಿಸಿದೆ. ಅವಳು ಅವನ ಸಹೋದ್ಯೋಗಿಗಳ ಮುಂದೆ ಅವನೊಂದಿಗೆ ಜಗಳವಾಡಿದ್ದಾಳೆ.
ಜೊತೆಗೆ ಇಬ್ಬರೂ ಮಹಿಳೆಯರು ಸಂತೋಷ್‌ಗೆ ಮದುವೆಯಾಗುವಂತೆ ಒತ್ತಾಯಿಸಿದ್ದಾರೆ. ನಿತ್ಯ ಹಿಂಸೆ ನೀಡಿದ್ದಾರೆ. ಆತನ ಮಾಜಿ ಗೆಳತಿ ಪದೇ ಪದೇ ಕರೆ ಮಾಡಿ ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದು, ಮತ್ತೋರ್ವ ಮಹಿಳೆ ಕೂಡ ಆತನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ. ಇದರಿಂದ ಮನನೊಂದ ಸಂತೋಷ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸದ್ಯ ಇಬ್ಬರು ಮಹಿಳೆಯರ ವಿರುದ್ಧ ಐಪಿಸಿ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಬ್ಬರ ವಿಚಾರಣೆ ನಡೆಸಲಾಗುತ್ತಿದ್ದು, ಪ್ರಕರಣ ತನಿಖೆಯಲ್ಲಿದೆ.