

ಇಸ್ರೋದ ನೂತನ ಅಧ್ಯಕ್ಷರನ್ನಾಗಿ ಹಿರಿಯ ವಿಜ್ಞಾನಿ ವಿ.ನಾರಾಯಣನ್ ಅವರನ್ನು ನೇಮಕ ಮಾಡಲಾಗಿದೆ. ಜೊತೆಗೆ ಡಿಪಾರ್ಟ್ಮೆಂಟ್ ಆಫ್ ಸ್ಪೇಸ್ನ ಕಾರ್ಯದರ್ಶಿಯಾಗಿಯೂ ಆಯ್ಕೆ ಆಗಿದ್ದಾರೆ.
ಹಾಲಿ ಅಧ್ಯಕ್ಷ ಎಸ್.ಸೋಮನಾಥ್ ಅವರ ಉತ್ತರಾಧಿಕಾರಿಯಾಗಿ ನಾರಾಯಣನ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಜನವರಿ 14 ರಿಂದ ಭಾರತೀಯ ಬಾಹ್ಯಾಕಾಶ ಸಂಸ್ಥೆಯು ನೂತನ ಮುಖ್ಯಸ್ಥರನ್ನು ಪಡೆಯಲಿದೆ. ಎಲ್ಪಿಎಸ್ಸಿ ಮುಖ್ಯಸ್ಥರಾಗಿರುವ ನಾರಾಯಣನ್ ಅಧಿಕಾರವಧಿ ಎರಡು ವರ್ಷಗಳಾಗಿರುತ್ತದೆ. ಸ್ಪೇಸ್ ಕಮಿಷನ್ (Space Commission) ಅಧ್ಯಕ್ಷರೂ ಆಗಿರಲಿರುವ ನಾರಾಯಣನ್, ಕ್ರಯೋಜೆನಿಕ್ ಎಂಜಿನ್ಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಆಯ್ಕೆ ಬೆನ್ನಲ್ಲೇ ತಿರುವನಂತಪುರಂನಲ್ಲಿ ಪ್ರತಿಕ್ರಿಯಿಸಿರುವ ಇಸ್ರೋದ ನೂತನ ಮುಖ್ಯಸ್ಥರು, ಭಾರತಕ್ಕಾಗಿ ನಾವು ಸ್ಪಷ್ಟ ಮಾರ್ಗಸೂಚಿಯನ್ನು ಹೊಂದಿದ್ದೇವೆ. ನಮ್ಮಲ್ಲಿ ಉತ್ತಮ ಪ್ರತಿಭೆಗಳಿರುವುದರಿಂದ ಇಸ್ರೋವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಭರವಸೆ ಇದೆ ಎಂದಿದ್ದಾರೆ.
ಪ್ರಸ್ತುತ ನಾರಾಯಣನ್ ಉನ್ನತ ಶ್ರೇಣಿಯ ಹಿರಿಯ ವಿಜ್ಞಾನಿ, ಇಸ್ರೋದ ನಿರ್ದೇಶಕರಲ್ಲಿ ಒಬ್ಬರು. ಇಸ್ರೋದಲ್ಲಿ ಅವರು LPSC ನ ಮುಖ್ಯಸ್ಥರಾಗಿ ಮುನ್ನಡೆಸುತ್ತಿದ್ದಾರೆ. ಅಂದ್ಹಾಗೆ ಇವರ ಊರು ತಮಿಳುನಾಡಿನ ಕನ್ಯಾಕುಮಾರಿ. ತಮಿಳು ಮಾಧ್ಯಮದಲ್ಲಿ ಬಾಲ್ಯದ ಶಿಕ್ಷಣವನ್ನು ಪಡೆದುಕೊಂಡರು. ನಂತರ Cryogenic Engineering ವಿಭಾಗದಲ್ಲಿ M Tech ಪದವಿ ಪಡೆದುಕೊಂಡರು. ಐಐಟಿ ಏರೋಸ್ಪೇಸ್ ಎಂಜಿನಿಯರಿಂಗ್ನಲ್ಲಿ ಪಿಹೆಚ್ಡಿ ಪಡೆದುಕೊಂಡಿದ್ದಾರೆ. ಎಂಟೆಕ್ ಪ್ರೋಗ್ರಾಮ್ನಲ್ಲಿ ಸಿಲ್ವರ್ ಮೆಡಲ್ ಗೌರವಕ್ಕೆ ಪಾತ್ರರಾಗಿದ್ದಾರೆ. 1984ರಿಂದ ಇಸ್ರೋದಲ್ಲಿ ಕಾರ್ಯ ನಿರ್ವಹಿಸುತ್ತ ಬಂದಿದ್ದಾರೆ.