ಜಮ್ಮುವಿನ ವೈಷ್ಣೋ ದೇವಿಯ ಗುಹಾ ದೇಗುಲಕ್ಕೆ ಈ ವರ್ಷ ಹೊಸ ದಾಖಲೆಗೆ ಸಾಕ್ಷಿಯಾಗಿದೆ. ಇಲ್ಲಿಯವರೆಗೆ 93.50 ಲಕ್ಷಕ್ಕೂ ಹೆಚ್ಚು ಭಕ್ತಾಧಿಗಳು ಧಾರ್ಮಿಕ ಕ್ಷೇತ್ರವನ್ನು ಭೇಟಿ ಮಾಡಿದ್ದು, ಇದು ದಶಕದಲ್ಲೇ ಅತಿ ಹೆಚ್ಚು ಎಂದು ವರದಿ ಉಲ್ಲೇಖಿಸಿದೆ.
ದೇಗುಲದ ಅಧಿಕಾರಿಗಳ ಪ್ರಕಾರ, ಡಿ. 25 ರ ವೇಳೆಗೆ ಒಟ್ಟು 93.50 ಲಕ್ಷ ಜನರು ಜಮ್ಮುವಿನ ರಿಯಾಸಿ ಜಿಲ್ಲೆಯ ತ್ರಿಕೂಟ ಬೆಟ್ಟಗಳ ದೇವಾಲಯಕ್ಕೆ ಭೇಟಿ ನೀಡಿದ್ದು, ಇದು 2013ರ ಅಂಕಿ ಅಂಶ 93.24 ಲಕ್ಷವನ್ನು ಮೀರಿಸಿದೆ.
‘93.24 ಲಕ್ಷಕ್ಕೂ ಹೆಚ್ಚು ಯಾತ್ರಿಕರ ಹೊಸ ದಾಖಲೆಯೊಂದಿಗೆ ತೀರ್ಥಯಾತ್ರೆಯು ಕಳೆದ ಹತ್ತು ವರ್ಷಗಳಲ್ಲಿ ಅತ್ಯಧಿಕವಾಗಿದೆ. ತೀರ್ಥಯಾತ್ರೆಯ ಇತಿಹಾಸದಲ್ಲಿ 2012ರಲ್ಲಿ 1,04,09,569 ಭಕ್ತರು, ನಂತರ 2011ರಲ್ಲಿ 1,01,15,647 ಅತ್ಯಧಿಕ ಸಂಖ್ಯೆಯ ಭಕ್ತರು ಭೇಟಿ ನೀಡಿದ್ದರು. 37,000ರಿಂದ 44,000 ಭಕ್ತರು ಪ್ರತಿದಿನ ದೇಗುಲಕ್ಕೆ ಪಾದಯಾತ್ರೆಯನ್ನು ಪ್ರಾರಂಭಿಸುತ್ತಿದ್ದಾರೆ’ ಎಂದು ಶ್ರೀ ಮಾತಾ ವೈಷ್ಣೋದೇವಿ ದೇಗುಲ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕರಾದ ಅಧಿಕಾರಿ ಅಂಶುಲ್ ಗಾರ್ಗ್ ತಿಳಿಸಿದ್ದಾರೆ.
ವರ್ಷಾಂತ್ಯದ ವೇಳೆಗೆ ಈ ಅಂಕಿ ಅಂಶವು 50,000 ತಲುಪುತ್ತದೆ ಎಂದು ಗಾರ್ಗ್ ನಿರೀಕ್ಷಿಸಿದ್ದು, ಈ ವರ್ಷ ದೇವರ ದರ್ಶನಕ್ಕೆ ಆಗಮಿಸುವ ಭಕ್ತರ ಸಂಖ್ಯೆ 95 ಲಕ್ಷ ಮೀರಲಿದೆ ಎಂದು ಅಂದಾಜಿಸಲಾಗಿದೆ. ಮಾತಾ ವೈಷ್ಣೋ ದೇವಿ ಭವನ ಮತ್ತು ದುರ್ಗಾ ಭವನದಲ್ಲಿ ಸ್ಕೈವಾಕ್ ಸೇರಿದಂತೆ ಸೌಲಭ್ಯಗಳ ವಿಷಯದಲ್ಲಿ ಈ ದೇವಾಲಯವು ಇತ್ತೀಚಿನ ದಿನಗಳಲ್ಲಿ ಕೆಲವು ಹೊಸ ಸೇರ್ಪಡೆಗಳನ್ನು ಕಂಡಿದೆ.