Tuesday, June 25, 2024

ಕಾಶ್ಮೀರವು ಕೂಡಾ ಗಾಜಾ ಪಟ್ಟಿಯಂತಾಗುತ್ತದೆ ಎಂದು ಬೆದರಿಕೆ ಹಾಕಿದ ಫಾರೂಕ್ ಅಬ್ದುಲ್ಲಾ

ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದರೆ ಕಾಶ್ಮೀರದಲ್ಲಿ ರಕ್ತದೋಕುಳಿಯಾಗುತ್ತದೆ ಎಂದು ನಾಲಿಗೆ ಹರಿಬಿಟ್ಟಿದ್ದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಇದೀಗ ಮತ್ತೊಂದು ಬೆದರಿಕೆಯನ್ನು ಹಾಕಿದ್ದಾರೆ. ಪಾಕಿಸ್ತಾನದ ಸರ್ಕಾರದೊಂದಿಗೆ ಭಾರತ ಮಾತುಕತೆ ಆರಂಭಿಸದಿದ್ದರೆ ಕಾಶ್ಮೀರವು ಕೂಡ ಗಾಜಾ ಪಟ್ಟಿಯ ಹಣೆಬರಹವನ್ನೇ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಮಾತುಕತೆ ಮೂಲಕ ಜಮ್ಮು ಕಾಶ್ಮೀರದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಕಾಶ್ಮೀರದ ಸ್ಥಿತಿಯು ಗಾಜಾ ಹಾಗೂ ಪ್ಯಾಲೆಸ್ಟೀನ್ ಸ್ಥಿತಿಯಂತಾಗುತ್ತದೆ. ಸ್ನೇಹಿತರನ್ನು ಬದಲಿಸಬಹುದು ಆದರೆ ನೆರೆಹೊರೆಯವರನ್ನು ಬದಲಿಸಲಾಗದು ಎಂದು ಹಿಂದೆಯೇ ವಾಜಪೇಯಿಯವರು ಹೇಳಿದ್ದರು ಹಾಗಾಗಿ ನೆರೆಹೊರೆಯವರೊಂದಿಗೆ ಸ್ನೇಹದಿಂದ ಇರಬೇಕು ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಮುಂದುವರೆದು ಪಾಕಿಸ್ತಾನದೊಂದಿಗಿನ ಸಮಸ್ಯೆಗೆ ಯುದ್ಧ ಪರಿಹಾರವಲ್ಲ ಎಂದು ಹಾಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಹೇಳಿದ್ದಾರೆ. ಮಾತು ಕತೆ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.

ಪಾಕಿಸ್ತಾನದ ಹಿಂದಿನ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಮತ್ತೆ ಅಧಿಕಾರಕ್ಕೆ ಬರುವ ಹಂತದಲ್ಲಿರುವ ನವಾಜ್ ಷರೀಫ್ ಕೂಡ ಮಾತುಕತೆಗೆ ಒತ್ತಾಯ ಮಾಡುತ್ತಿದ್ದಾರೆ. ಆದರೆ ಭಾರತ ಸರ್ಕಾರವೇ ಮಾತುಕತೆಗೆ ಯಾವುದೇ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ. ಈ ರೀತಿ ಆದರೆ ಕಾಶ್ಮೀರದ ಸ್ಥಿತಿಯು ಗಾಜಾ ಹಾಗೂ ಪ್ಯಾಲೆಸ್ತೀನ್​ ರೀತಿಯಾಗುತ್ತದೆ. ಇಸ್ರೇಲಿಗಳು ಅಲ್ಲಿ ಬಾಂಬ್ ಹಾಕಿರುವಂತೆ ಇಲ್ಲಿಯೂ ಅದೇ ಸ್ಥಿತಿ ನಿರ್ಮಾಣವಾಗಬಹುದು ಎಂದಿದ್ದಾರೆ.

ಇದಕ್ಕೆ ಸ್ಥಳೀಯ ಬಿಜೆಪಿ ನಾಯಕರು ಕಿಡಿಕಾರಿದ್ದು, ಮಾತುಕತೆಗೆ ಪೂರಕ ವಾತಾವರಣ ನಿರ್ಮಿಸದ ಹಾಗೂ ಉಗ್ರವಾದವನ್ನು ಬೆಂಬಲಿಸುವ ಪಾಕಿಸ್ತಾನದ ಜತೆಗೆ ಮಾತುಕತೆ ಹೇಗೆ ಸಾಧ್ಯ, ಫಾರೂಕ್ ಅಬ್ದುಲ್ಲಾ ಇಂತಹ ದ್ವಂದ್ವವನ್ನು ಹೇಗೆ ಒಪ್ಪಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.

Related Articles

Latest Articles