Sunday, October 13, 2024

GAY ಆ್ಯಪ್​​ ಡೇಟಿಂಗ್; ಕರೆಸಿಕೊಂಡಿದ್ದ ವ್ಯಕ್ತಿ ಗ್ಯಾಂಗ್ ಸಮೇತ ಬಂದು ಮೊಬೈಲ್, ಹಣ, ಚಿನ್ನಾಭರಣ ದರೋಡೆ

ಆಧುನಿಕ ಯುಗದಲ್ಲಿ ಯುವಕರು ಡೇಟಿಂಗ್ ಆಪ್ ಮೊರೆ ಹೋಗುತ್ತಿದ್ದಾರೆ. ‌ಅನುಕೂಲ ಎಷ್ಟಿದೆಯೋ ಅಷ್ಟೇ ತೊಂದರೆಯೂ ಇದೆ. ‘GAY’ ಡೇಟಿಂಗ್ ಆ್ಯಪ್​​​ನಲ್ಲಿ ಪರಿಚಯವಾಗಿ ಕರೆಸಿಕೊಂಡಿದ್ದ ವ್ಯಕ್ತಿ ಇತರ ಆಗಂತುಕರ ಜತೆ ಸೇರಿ ಮನೆಯಲ್ಲಿದ್ದ ಚಿನ್ನಾಭರಣ ಸುಲಿಗೆ ಮಾಡಿ ಪರಾರಿಯಾದ ಘಟನೆ ಬೆಂಗಳೂರಿನ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆರೋಪಿಗಳು ಫರ್ಹಾನ್ ಎಂಬಾತ ಮತ್ತು ಆತನ ಗ್ಯಾಂಗ್​ನವರು ಎಂದು ಹೇಳಲಾಗಿದ್ದು, ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ನದೀಂ ಎಂಬಾತನಿಗೆ GRINDR ಎಂಬ ಡೇಟಿಂಗ್ ಆ್ಯಪ್​​​ನಲ್ಲಿ ಫರ್ಹಾನ್ ಎಂಬಾತ ಪರಿಚಯವಾಗಿತ್ತು. ನಂತರ ನದೀಂ ಆ್ಯಪ್​ ಮೂಲಕ ಮೆಸೇಜ್ ಮಾಡಿ ಫರ್ಹಾನ್​​ನನ್ನು ತನ್ನ ಮನೆಗೆ ಕರೆಸಿಕೊಂಡಿದ್ದ. ಸ್ವಲ್ಪ ಸಮಯ ಇಬ್ಬರೂ ಮಾತುಕತೆ ನಡೆಸಿದ್ದಾರೆ. ಬಳಿಕ ನದೀಂ ವಾಷ್ ರೂಂಗೆ ಹೋಗಿದ್ದರು. ಇದೇ ವೇಳೆ, ಏಕಾಏಕಿ ದೊಣ್ಣೆಗಳೊಂದಿಗೆ ನಾಲ್ವರು ಆಗಂತುಕರು ಮನೆಯೊಳಗೆ ನುಗ್ಗಿದ್ದಾರೆ. ಇವರನ್ನೆಲ್ಲ ಫರ್ಹಾನ್ ಕರೆ ತಂದಿದ್ದ ಎನ್ನಲಾಗಿದೆ.

ಏಕಾಏಕಿ ಮನೆಯೊಳಗೆ ನುಗ್ಗಿದ ಆಗಂತುಕರು ನದೀಂ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಆದರೆ, ಪರಾರಿಯಾಗುವುದಕ್ಕೂ ಮುನ್ನ ನದೀಂ ಬಳಿ ಇದ್ದ 45 ಸಾವಿರ ರೂ. ಮೌಲ್ಯದ ಮೊಬೈಲ್, ದುಬಾರಿ ವಾಚ್​ಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ದೋಚಿದ್ದಾರೆ. ಸಂತ್ರಸ್ತನ ಗೂಗಲ್ ಪೇ, ಫೋನ್​ಪೇನಲ್ಲಿದ್ದ ಹಣವನ್ನೂ ತಮ್ಮ ಖಾತೆಗಳಿಗೆ ಆರೋಪಿಗಳು ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

ಘಟನೆ ಸಂಬಂದ ಫರ್ಹಾನ್ ಹಾಗೂ ಇನ್ನಿತರರ ವಿರುದ್ಧ ನದೀಂ ಪೊಲೀಸರಿಗೆ ದೂರು ನೀಡಿದ್ದಾರೆ. ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Related Articles

Latest Articles