ಬೆಂಗಳೂರು: ಕೆಲಸದಿಂದ ವಜಾಗೊಳಿಸಿದ್ದಕ್ಕೆ ಬೆಂಗಳೂರಿನ ಖ್ಯಾತ ಕಂಪೆನಿಗೆ ಬೆಳಗಾವಿ ಮೂಲದ ಯುವತಿಯೊಬ್ಬಳು ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದಾಳೆ. ಇದರಿಂದ ಕಂಪೆನಿ ಉದ್ಯೋಗಿಗಳು ಕೆಲ ಹೊತ್ತು ಆತಂಕ ಪಡುವಂತಾಗಿದೆ.
ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಟಿ.ಸಿ.ಎಸ್ ( Tata Consultancy Services) ಕಂಪನಿಯ ಮಾಜಿ ಉದ್ಯೋಗಿ ಹುಸಿ ಬಾಂಬ್ ಕರೆ ಮಾಡಿದ್ದು, ಕರೆ ಬರುತ್ತಿದ್ದಂತೆ ಉದ್ಯೋಗಿಗಳು ಕಟ್ಟಡದಿಂದ ಹೊರಗೆ ಓಡಿ ಬಂದಿದ್ದಾರೆ.
ಕಟ್ಟಡದ ಬಿ ಬ್ಲಾಕ್ ನಲ್ಲಿ ಬಾಂಬ್ ಇರುವುದಾಗಿ ಬೆಳಗಾವಿ ಮೂಲದ ಯುವತಿ ಬೆದರಿಕೆ ಕರೆ ಮಾಡಿದ್ದಾಳೆ ಎನ್ನಲಾಗಿದೆ. ಕರೆ ಬರುತ್ತಿದ್ದಂತೆ ಕಂಪನಿಯಿಂದ ಹೊರಬಂದ ಉದ್ಯೋಗಿಗಳು, ಕೂಡಲೇ ಪರಪ್ಪನ ಅಗ್ರಹಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಪರಪ್ಪನ ಅಗ್ರಹಾರ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯದಳ ಕಂಪನಿಯ ಬಿ ಬ್ಲಾಕ್ ನಲ್ಲಿ ಪರಿಶೀಲನೆ ನಡೆಸಿದ್ದು, ಯಾವುದೇ ಬಾಂಬ್ ಪತ್ತೆಯಾಗದ್ದರಿಂದ ನಿಟ್ಟುಸಿರು ಬಿಟ್ಟಿದ್ದಾರೆ.
ಇತ್ತೀಚೆಗೆ ಕೆಲಸದಿಂದ ತೆಗೆದಿದ್ದಕ್ಕೆ ಅಸಮಾಧಾನಗೊಂಡಿದ್ದ ಯುವತಿ ಕಂಪೆನಿಯ ಕ್ಯಾಬ್ ಚಾಲಕನಿಗೆ ಕರೆ ಮಾಡಿ ಕಟ್ಟಡದಲ್ಲಿ ಬಾಂಬ್ ಇರುವುದಾಗಿ ಹೇಳಿರುವುದಾಗಿ ವರದಿಯಾಗಿದೆ. ಯುವತಿ ಕುಡಿದ ಮತ್ತಿನಲ್ಲಿ ಕರೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದ್ದು, ಬೆಳಗಾವಿಯಿಂದಲೇ ಆಕೆಯನ್ನು ವಶಕ್ಕೆ ಪಡೆಯಲು ಸಿದ್ದತೆ ನಡೆಸಲಾಗುತ್ತಿದೆ ಎನ್ನಲಾಗಿದೆ.