ಬೆಂಗಳೂರು: ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದುಕೊಂಡು ನಗರದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ವಿಚಾರಣಾ ಕೈದಿ ಸಿಕ್ಕಿಬಿದ್ದಿದ್ದಾನೆ.
ಅಪರಾಧ ಪ್ರಕರಣವೊಂದರಲ್ಲಿ ಸುದ್ದುಗುಂಟೆಪಾಳ್ಯ ಪೊಲೀಸರಿಂದ ಬಂಧಿತನಾಗಿ ಜೈಲು ಸೇರಿರುವ ಮಂಜುನಾಥ್ ಆಲಿಯಾಸ್ ಸಂಜು ಪ್ರಮುಖ ಆರೋಪಿ. ಈತನೊಂದಿಗೆ ಕೃತ್ಯಕ್ಕೆ ಸಹಕಾರ ನೀಡುತ್ತಿದ್ದ ಸಹಚರರಾದ ಅರುಣ್, ರಾಘವೇಂದ್ರ ಹಾಗೂ ದರ್ಶನ್ ಎಂಬುವರನ್ನೂ ಬಂಧಿಸಲಾಗಿದೆ.
ವೇಶ್ಯಾವಾಟಿಕೆಯನ್ನು ಪ್ರವೃತ್ತಿ ಮಾಡಿಕೊಂಡಿದ್ದ ಮಂಜುನಾಥ್, ಜೈಲಿನಲ್ಲಿ ಆಪ್ವೊಂದರ ಮುಖಾಂತರ ಗಿರಾಕಿಗಳೊಂದಿಗೆ ಸಂಪರ್ಕ ಸಾಧಿಸುತ್ತಿದ್ದ.
ದಂಧೆಯಲ್ಲಿ ತೊಡಗಿಸಲು ಹೊರರಾಜ್ಯಗಳಿಂದ ಯುವತಿಯರನ್ನು ಹಣದ ಆಮಿಷವೊಡ್ಡಿ ನಗರಕ್ಕೆ ಕರೆತರುತ್ತಿದ್ದ. ನಂತರ ಹುಳಿಮಾವಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ಇರಿಸಿ, ಕಳೆದ ಕೆಲ ತಿಂಗಳಿಂದ ಇದೇ ಮನೆಯಲ್ಲಿ ಹುಡುಗಿಯರನ್ನು ಇಟ್ಟುಕೊಂಡು ದಂಧೆ ನಡೆಸುತ್ತಿದ್ದ.
ಇದೇ ಆರೋಪದಡಿ ಸುದ್ದುಗುಂಟೆಪಾಳ್ಯ ಪೊಲೀಸರಿಂದ ಮಂಜುನಾಥ್ ಬಂಧಿತನಾಗಿದ್ದ. ಜೈಲಿನಲ್ಲಿಯೂ ತನ್ನ ದಂಧೆಯನ್ನು ಮುಂದುವರೆಸಿದ್ದ ಮಂಜುನಾಥ್ ವಾಟ್ಸಪ್ ಕರೆ ಮಾಡಿ ಗಿರಾಕಿಗಳ ಸಂಪರ್ಕ ಸಾಧಿಸಿ ಯುವತಿಯರಿರುವ ಮನೆಯ ಲೊಕೇಷನ್ ಕಳುಹಿಸುತ್ತಿದ್ದ. ಗೂಗಲ್ ಪೇ ಮೂಲಕ ಗ್ರಾಹಕರಿಂದ ಹಣ ಪಡೆಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ಕೆಲಸ ಅರಸಿ ಬೆಂಗಳೂರಿಗೆ ಬರುವ ಯುವತಿಯರನ್ನು ಗುರಿಯಾಗಿಸಿಕೊಂಡು ಹಣದ ಆಮಿಷವೊಡ್ಡಿ ತಾನು ನಡೆಸುತ್ತಿದ್ದ ದಂಧೆಗೆ ಬಳಸಿಕೊಳ್ಳುತ್ತಿದ್ದ.
ಸಿಕ್ಕಿಬಿದ್ದ ಇತರ ಆರೋಪಿಗಳಿಗೂ ಕಮೀಷನ್ ರೀತಿಯಲ್ಲಿ ಹಣ ನೀಡುತ್ತಿದ್ದ. ಕೃತ್ಯ ನಡೆದ ಸ್ಥಳದ ಆಧಾರದ ಮೇರೆಗೆ ಸಿಸಿಬಿ ಪೊಲೀಸರು ಆರೋಪಿಗಳನ್ನು ಹುಳಿಮಾವು ಪೊಲೀಸರಿಗೆ ಒಪ್ಪಿಸಿದ್ದಾರೆ. ಜೈಲಿನಲ್ಲಿರುವ ಮಂಜುನಾಥ್ನನ್ನು ಬಾಡಿ ವಾರೆಂಟ್ ಮೇರೆಗೆ ವಶಕ್ಕೆ ಪಡೆದುಕೊಂಡು ಹೆಚ್ವಿನ ವಿಚಾರಣೆಗೊಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.