ಕರ್ನಾಟಕ ಮತ್ತು ತೆಲಂಗಾಣ ಗಡಿಯಲ್ಲಿರುವ ಶಕ್ತಿ ನಗರ ಬಳಿಯ ಕೃಷ್ಣಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡುತ್ತಿದ್ದಾಗ ಪತ್ತೆಯಾದ ಪುರಾತನ ವಿಗ್ರಹಗಳು ಪತ್ತೆಯಾಗಿರುವುದು ಅಂತಾರಾಜ್ಯ ವಿವಾದಕ್ಕೆ ಕಾರಣವಾಗುತ್ತಾ ಎನ್ನುವ ಪ್ರಶ್ನೆ ಎದ್ದಿದೆ. ಶ್ರೀಕೃಷ್ಣನ ದಶಾವತಾರದ ವಿಗ್ರಹ ಹಾಗೂ ಶಿವನ ಲಿಂಗ ತಮ್ಮದು ಎಂದು ಕರ್ನಾಟಕ ಹೇಳುತ್ತಿದ್ದು, ಅತ್ತ ತೆಲಂಗಾಣವು ಈ ವಿಗ್ರಹಗಳು ತಮಗೆ ಸೇರಿದ್ದು ಎನ್ನುವ ಕ್ಯಾತೆ ತೆಗೆದಿದೆ.
ತೆಲಂಗಾಣ-ರಾಯಚೂರು ಹಗ್ಗ ಜಗ್ಗಾಟದಲ್ಲಿ ವಿಗ್ರಹಗಳು ಅನಾಥವಾಗಿವೆ. ಇದು ರಾಯಚೂರು ತಾಲೂಕಿನ ದೇವಸುಗೂರು ಸೀಮೆಗೆ ಬರತ್ತದೆ, ಹೀಗಾಗಿ ನಮಗೆ ಸೇರಿದ್ದು ಅಂತ ಸ್ಥಳೀಯ ರಾಯಚೂರಿಗರ ವಾದವಾಗಿದೆ. ಜಟಾಪಟಿ ನಡೆಯುತ್ತಿದ್ದರೂ ಅಧಿಕಾರಿಗಳು ವಿಗ್ರಹಗಳ ರಕ್ಷಣೆಗೆ ಮುಂದಾಗದಿರುವ ಆರೋಪ ಕೇಳಿಬಂದಿದೆ.
ಕೃಷ್ಣಾ ನದಿಯಲ್ಲಿ ಶ್ರೀಕೃಷ್ಣನ ದಶಾವತಾರದ ವಿಗ್ರಹ ಹಾಗೂ ಶಿವನ ಲಿಂಗ ಪತ್ತೆಯಾಗಿದ್ದು, ವಿಗ್ರಹಗಳನ್ನು ಸುರಕ್ಷಿತವಾಗಿ ನದಿಯಿಂದ ಹೊರತೆಗೆಯಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪುರಾತತ್ವ ಇಲಾಖೆಗೆ ಸಿಬ್ಬಂದಿ ವಿಗ್ರಹಗಳನ್ನು ಪರಿಶೀಲಿಸಿ ತಮ್ಮ ಸುಪರ್ದಿಗೆ ಪಡೆದಿದ್ದಾರೆ. ದೇವಸ್ಥಾನಗಳ ಧ್ವಂಸದ ವೇಳೆ ಮತಾಂದರ ಕೈಯಿಂದ ವಿಗ್ರಹಗಳನ್ನು ರಕ್ಷಿಸಿಕೊಳ್ಳಲು ಅಂದಿನ ಜನರು ವಿಗ್ರಹಗಳನ್ನು ನದಿಯಲ್ಲಿ ಬಿಡಲಾಗಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಈ ಹಿಂದೆ ಇಲ್ಲಿ ಅನೇಕ ರಾಜ ಮನೆತನಗಳಿದ್ದವು. ರಾಯಚೂರು ಭಾಗದಲ್ಲಿ ಬರೊಬ್ಬರಿ 163 ಯುದ್ಧಗಳು ನಡೆದಿವೆ. ಬಹುಮನಿಸುಲ್ತಾನರು ಹಾಗೂ ಆದಿಲ್ ಶಾಹಿಗಳ ದಾಳಿಯಿಂದ ವಿಗ್ರಹಗಳನ್ನು ರಕ್ಷಿಸಿಕೊಳ್ಳಲು ನದಿಗೆ ಹಾಕಲಾಗಿದೆ. ಈ ವಿಗ್ರಹಗಳ ಬಗ್ಗೆ ಇತಿಹಾಸ ತಜ್ಞೆ ಪದ್ಮಜಾ ದೇಸಾಯಿ ಮಾತನಾಡಿ, ಬಹುಮನಿ ಸುಲ್ತಾನರ ಅವಧಿಯಲ್ಲಿ ಗರ್ಭ ಗುಡಿಯಲ್ಲಿ ಮೂರ್ತಿಗಳನ್ನು ಕೃಷ್ಣಾ ನದಿಗೆ ಬೀಸಾಡಿರಬಹುದು. ಇದೀಗ ಕಾಮಗಾರಿ ವೇಳೆ ವಿಗ್ರಹಗಳು ದೊರೆತಿವೆ.
ಸದ್ಯ ದೊರೆತದ್ದು ಹಸಿರು ಮಿಶ್ರಿತ ಶಿಲೆಯಾಗಿದ್ದು, ಈ ಮಾದರಿಯ ಶಿಲೆಗಳನ್ನು ಕಲ್ಯಾಣ ಚಾಲುಕ್ಯರು ಬಳಸುತ್ತಿದ್ದರು. ಹೀಗಾಗಿ ಈ ವಿಗ್ರಹಗಳು 11ನೇ ಶತಮಾನದ ಕಲ್ಯಾಣ ಚಾಲುಕ್ಯರಿಗೆ ಸೇರಿವೆ ಎಂದು ಇತಿಹಾಸ ತಜ್ಞೆ ಪದ್ಮಜಾ ದೇಸಾಯಿ ಹೇಳಿದ್ದಾರೆ. ಅಲ್ಲದೆ ಈ ಬಗ್ಗೆ ಸಂಶೋಧನೆ ನಡೆಸಬೇಕಿದೆ ಎಂದಿದ್ದಾರೆ.
ಬಾಲರಾಮನ ಮೂರ್ತಿಗೆ ಹೋಲಿಕೆ..!
ಆಯೋಧ್ಯೆಯಲ್ಲಿ ಪ್ರತಿಷ್ಠಾಪಿಸಲಾದ ಬಾಲರಾಮನ ಮೂರ್ತಿಗೂ ನದಿಯಲ್ಲಿ ಸಿಕ್ಕಿರುವ ವಿಷ್ಣುವಿನ ಮೂರ್ತಿಗೂ ಸಾಕಷ್ಟು ಸಾಮ್ಯತೆಗಳಿದೆ ಎಂದು ಹಲವು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.