ಉತ್ತರಾಖಂಡ ವಿಧಾನಸಭೆಯಲ್ಲಿ ಮಹತ್ವದ ಏಕರೂಪ ನಾಗರಿಕ ಸಂಹಿತೆ ಮಸೂದೆ ಅಂಗೀಕಾರವಾಗಿದೆ. ಮನೆಯಿಂದ ಸಂವಿಧಾನದ ಪ್ರತಿ ಹಿಡಿದು ವಿಧಾನಸಭೆಗೆ ಬಂದ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು ಅಸೆಂಬ್ಲಿಯಲ್ಲಿ ಮಸೂದೆಯನ್ನು ಮಂಡಿಸಿದ್ದಾರೆ. ವಿಧಾನಸಭೆಯಲ್ಲಿ ಮಸೂದೆಗೆ ಅಂಗೀಕಾರ ದೊರೆತಿದ್ದು, ರಾಜ್ಯಪಾಲರ ಅಂಕಿತದ ಬಳಿಕ ಕಾಯಿದೆಯಾಗಿ ಜಾರಿಯಾಗಲಿದೆ.
ಈಗಾಗಲೇ ಗೋವಾದಲ್ಲಿ ಪೋರ್ಚುಗೀಸರ ಕಾಲದ ಏಕರೂಪ ನಾಗರಿಕ ಸಂಹಿತೆ ಜಾರಿಯಲ್ಲಿದೆ. ಸ್ವತಂತ್ರ್ಯ ಭಾರತದಲ್ಲಿ ದೇಶದಲ್ಲಿ ಈ ಕಾಯಿದೆ ಮೂಲಕ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಿದ ಮೊದಲ ರಾಜ್ಯ ಉತ್ತರಾಖಂಡ ಆಗಿದೆ.
ಏಕರೂಪ ನಾಗರಿಕ ಸಂಹಿತೆಯ ಕರಡು ವರದಿಯನ್ನು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ರಂಜನ್ ಪ್ರಕಾಶ್ ದೇಸಾಯಿ ನೇತೃತ್ವದ ತಜ್ಞರ ಸಮಿತಿ ಸಿದ್ಧಪಡಿಸಿತ್ತು. ಕ್ಯಾಬಿನೆಟ್‌ನಲ್ಲಿ ಈ ಕರಡು ವರದಿಗೆ ಒಪ್ಪಿಗೆ ಪಡೆದ ಬಳಿಕ ಉತ್ತರಾಖಂಡ ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಮಸೂದೆ ಅಂಗೀಕಾರ ಮಾಡಲಾಗಿದೆ.
370ನೇ ವಿಧಿಯಡಿ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು, ಅಯೋಧ್ಯೆ ರಾಮಮಂದಿರ ನಿರ್ಮಾಣ ಹಾಗೂ ಏಕರೂಪ ನಾಗರಿಕ ಸಂಹಿತೆ ಕಾಯ್ದೆ ಜಾರಿಗೆ ತರುವುದು ಬಿಜೆಪಿ ಚುನಾವಣಾ ಪ್ರಣಾಳಿಕೆಯ ಬಹುಮುಖ್ಯ ಭರವಸೆಗಳು. ಕಾಶ್ಮೀರದ 370ನೇ ವಿಧಿ ರದ್ದಾದ ಬಳಿಕ ರಾಮಮಂದಿರವೂ ನಿರ್ಮಾಣವಾಗಿದೆ. ಇದೀಗ ಉತ್ತರಾಖಂಡನಲ್ಲಿ ಏಕರೂಪ ನಾಗರಿಕ ಸಂಹಿತೆ ಮಸೂದೆ ಅಂಗೀಕಾರವಾಗಿದ್ದು, ದೇಶದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳು ಕಾಯ್ದೆಯ ಜಾರಿಗೆ ಮುಂದಾಗಿವೆ. ಮೂಲಗಳ ಪ್ರಕಾರ ಉತ್ತರಾಖಂಡ ಬಳಿಕ ಶೀಘ್ರದಲ್ಲೇ ರಾಜಸ್ಥಾನ ವಿಧಾನಸಭೆಯಲ್ಲೂ ಏಕರೂಪ ನಾಗರಿಕ ಸಂಹಿತೆ ಮಸೂದೆ ಮಂಡಿಸುವ ಸಿದ್ಧತೆ ನಡೆದಿದೆ