Wednesday, December 11, 2024

ಮೈಸೂರು: ಕಾಡಾನೆ ದಾಳಿಗೆ ರೈತ ಬಲಿ

ಮೈಸೂರು : ಜಮೀನಿನಲ್ಲಿ ಬೆಳೆ ಕಾವಲಿಗೆ ಹೋಗಿದ್ದ ರೈತನ ಮೇಲೆ ಕಾಡಾನೆ ದಾಳಿ ಮಾಡಿದೆ. ಪರಿಣಾಮ ರೈತ ಜಮೀನಿನಲ್ಲೇ ಮೃತಪಟ್ಟಿದ್ದಾನೆ. ಈ ಘಟನೆ ಎಚ್​ಡಿ ಕೋಟೆ ತಾಲೂಕಿನ ಮಾಸ್ತಿಗುಡಿಯ ಪುನರ್ವಸತಿ ತಾಣದ ಬಳಿ ನಡೆದಿದೆ.

ಎಚ್​ಡಿ ಕೋಟೆ ತಾಲೂಕಿನ ಮಾಸ್ತಿಗುಡಿ ಗ್ರಾಮದ ರೈತ ವಸಂತ (35) ಈತ ತನ್ನ ಜಮೀನಿನಲ್ಲಿ ಹಾಕಿದ್ದ ಮುಸುಕಿನ ಜೋಳವನ್ನು ಕಾಡು ಪ್ರಾಣಿಗಳಿಂದ ರಕ್ಷಣೆ ಮಾಡಲು ಕಾವಲಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ಗುರುವಾರ ತಡರಾತ್ರಿ ಆಹಾರ ಅರಸಿ ನಾಗರಹೊಳೆ ಕಾಡಿನಿಂದ ಕಾಡಾನೆ ಬಂದಿದೆ. ಈ ಆನೆಯನ್ನು ಹಿಮ್ಮೆಟ್ಟಿಸಲು ಹೋದ ರೈತ ವಸಂತ್ ಮೇಲೆ ಕಾಡಾನೆ ದಾಳಿ ಮಾಡಿದೆ. ಪರಿಣಾಮ ರೈತ ವಸಂತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಾಹಿತಿ ತಿಳಿದಾಕ್ಷಣ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇನ್ನು ಮಾಸ್ತಿಗುಡಿ ಹಾಡಿಯ ನಿವಾಸಿಗಳು ಹಾಗೂ ರೈತರು ಭೀಮನಹಳ್ಳಿಯ ಬಳಿ ರಸ್ತೆ ತಡೆದು, ಪ್ರತಿಭಟನೆ ನಡೆಸಿದ್ದರು. ಮೃತ ರೈತ ಕುಟುಂಬಕ್ಕೆ ಪರಿಹಾರ ನೀಡಬೇಕು ಹಾಗೂ ಕಾಡು ಪ್ರಾಣಿಗಳು ಬರದಂತೆ ತಡೆಯಬೇಕು ಎಂದು ಆಗ್ರಹಿಸಿದ್ದರು.

ಪ್ರತಿಭಟನೆ ಮಾಹಿತಿ ತಿಳಿದು ಸ್ಥಳಕ್ಕೆ ಎಚ್​ಡಿ ಕೋಟೆ ಪೋಲಿಸರು ದೌಡಾಯಿಸಿದ್ದರು. ರೈತರು ಪ್ರತಿಭಟನೆ ನಡೆಸದಂತೆ ಮನವೊಲಿಸಲು ಪೊಲೀಸರು ಯತ್ನಿಸಿದ್ದರು. ಈ ವೇಳೆ, ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಆನೆ ದಾಳಿ ಕುರಿತು ಎಚ್​ಡಿ ಕೋಟೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Latest Articles