ಆನ್‌ಲೈನ್ ರಮ್ಮಿ ಗೇಮ್ನಿಂದ ಸೋತು ಲಕ್ಷಾಂತರ ಹಣ ಕಳೆದುಕೊಂಡಿದ್ದ ತಮ್ಮ ತನ್ನ ಅಣ್ಣನ ಮದುವೆಗಾಗಿ ಇಟ್ಟಿದ್ದ ಚಿನ್ನಾಭರಣ ಕದ್ದ ಘಟನೆ ವರದಿಯಾಗಿದೆ. ಬೆಂಗಳೂರಿನ ಬೊಮ್ಮನಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆದಿತ್ಯ ಬಂಧಿತ ಆರೋಪಿ. ಇದೇ ತಿಂಗಳ 15ಕ್ಕೆ ಅಣ್ಣನ ಮದುವೆ ಫಿಕ್ಸ್ ಆಗಿತ್ತು. ಇದಕ್ಕಾಗಿ ಮನೆಯಲ್ಲಿ ಚಿನ್ನಾಭರಣ ಹಾಗೂ ಹಣ ಇಟ್ಟಿದ್ದರು. ಆದರೆ ಅದನ್ನು ಆದಿತ್ಯ ಕದ್ದು ಸಿಕ್ಕಿಬಿದ್ದಿದ್ದಾನೆ.

ಊಬರ್ ಚಾಲಕನಾಗಿದ್ದ ಆದಿತ್ಯ ವಿಪರೀತ ಆನ್‌ಲೈನ್ ಗೇಮ್ ಚಟಕ್ಕೆ ಬಿದ್ದಿದ್ದ. ಮನೆಯಲ್ಲಿದ್ದ ಎಲ್ಲರೂ ಮದುವೆ ಕಾರ್ಡ್ ಹಂಚಲು ಕೋಲಾರ ಹೋಗಿದ್ದರು. ಈ ವೇಳೆ ಮನೆಯಲ್ಲಿದ್ದ ಚಿನ್ನಾಭರಣ ಕದ್ದ ತಮ್ಮ ಆದಿತ್ಯ ಆಂಧ್ರಪ್ರದೇಶಕ್ಕೆ ಟ್ರೈನ್ ಹತ್ತಿದ್ದಾನೆ.
ಇತ್ತ ಮನೆಗೆ ಬಂದ ಅಣ್ಣನಿಗೆ ಮನೆಯಲ್ಲಿ ಇಟ್ಟಿದ್ದ ಚಿನ್ನಾಭರಣ ಮತ್ತು ಹಣ ಕಣ್ಮರೆಯಾಗಿರುವುದನ್ನು ಕಂಡು ಅನುಮಾನ ಬಂದಿದೆ. ಕೊನೆಗೆ ಪೋಷಕರು ಆದಿತ್ಯನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಬೊಮ್ಮನಹಳ್ಳಿ ಪೊಲೀಸರು ಕೂಡಲೇ ಟವರ್ ಡಂಪ್ ಲೊಕೇಷನ್ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಪ್ರಕರಣ ದಾಖಲಾದ 5 ಗಂಟೆಗಳಲ್ಲೇ ಆರೋಪಿ ಆದಿತ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 7 ಲಕ್ಷ ಬೆಲೆ ಬಾಳುವ 100 ಗ್ರಾಂ ಬೆಳ್ಳಿ 102 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.