ಉತ್ತರ ಪ್ರದೇಶದ ಅಮೇಥಿಯಲ್ಲಿ ನಡೆದ ಶಿಕ್ಷಕ, ಅವರ ಪತ್ನಿ ಮತ್ತು ಇಬ್ಬರು ಚಿಕ್ಕ ಮಕ್ಕಳ ಹತ್ಯೆಯ ಆರೋಪಿ ಸುಮಾರು ಒಂದು ತಿಂಗಳಿನಿಂದ ಹತ್ಯೆಗೆ ಸಂಚು ರೂಪಿಸಿದ್ದ ಎಂಬ ಭಯಾನಕ ಸತ್ಯ ಹೊರಬಿದ್ದಿದೆ. ಕೊಲೆ ಮಾಡುವ ಉದ್ದೇಶವನ್ನು ಕೊಲೆಘಾತುಕ ವಾಟ್ಸಾಪ್‌ನ ಬಯೋದಲ್ಲಿ ಹಾಕಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸುನೀಲ್ ಕುಮಾರ್, ಅವರ ಪತ್ನಿ ಪೂನಂ ಭಾರತಿ ಮತ್ತು ಅವರ ಕೇವಲ ಒಂದು ಮತ್ತು ಆರು ವರ್ಷದವರು ಇಬ್ಬರು ಹೆಣ್ಣುಮಕ್ಕಳನ್ನು ಅ.3ರಂದು ಅಮೇಥಿಯ ಭವಾನಿ ನಗರದಲ್ಲಿರುವ ಅವರ ಮನೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಈ ಘಟನೆ ನಂತರ ಹತ್ಯೆಗೀಡಾದ ಭಾರತಿ 2 ತಿಂಗಳ ಹಿಂದೆ ಚಂದನ್ ವರ್ಮಾ ಎಂಬಾತನ ವಿರುದ್ಧ ದೂರು ನೀಡಿರುವುದು ಬೆಳಕಿಗೆ ಬಂದಿದೆ. ಅದರಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಆತ ಕೊಲೆ ಬೆದರಿಕೆ ಹಾಕಿದ್ದ, ಏನಾದರೂ ಜೀವ ಹಾನಿ ಸಂಭವಿಸಿದರೆ ಆತನೆ ಹೊಣೆಗಾರ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಅಲ್ಲದೇ ಭಾರತಿ ಅವರು ಆಗಸ್ಟ್ 18 ರಂದು ರಾಯ್ ಬರೇಲಿಯ ಆಸ್ಪತ್ರೆಗೆ ಹೋಗಿದ್ದರು. ಈ ವೇಳೆ ವರ್ಮಾ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದ. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ತನ್ನ ಮತ್ತು ತನ್ನ ಪತಿಗೆ ಕಪಾಳಮೋಕ್ಷ ಮಾಡಿದ್ದ.
ಇದನ್ನು ಯಾರಿಗಾದರೂ ತಿಳಿಸಿದರೆ ನಿನ್ನನ್ನು ಸಾಯಿಸುತ್ತೇನೆ ಎಂದಿದ್ದ. ಇದಕ್ಕೂ ಮೊದಲು ಸಹ ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ನನ್ನ ಕುಟುಂಬ ಅಪಾಯದಲ್ಲಿದೆ ಎಂದು ದೂರು ನೀಡಿದ್ದರು. ಈ ಮಾಹಿತಿ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು.
ಹಿಂದೂಸ್ಥಾನ್ ಟೈಮ್ಸ್ ವರದಿ ಪ್ರಕಾರ, ಕೊಲೆ ಹಿಂದೆ ಅನೈತಿಕ ಸಂಬಂಧ ಇದೆ ಎನ್ನುವ ಆಘಾತಕಾರಿ ಅಂಶ ಬಹಿರಂಗವಾಗಿದೆ.
ಪೊಲೀಸರು ಚಂದನ್ ವರ್ಮಾನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಸೆಪ್ಟೆಂಬರ್ 12 ಆತನ ವಾಟ್ಸಾಪ್ ಬಯೋದಲ್ಲಿ ʻ5 ಜನರು ಸಾಯುತ್ತಾರೆ, ನಾನು ಶೀಘ್ರದಲ್ಲೇ ನಿಮಗೆ ತೋರಿಸುತ್ತೇನೆʼಎಂದು ಬರೆದುಕೊಂಡಿರುವುದು ಪತ್ತೆಯಾಗಿದೆ. ಹತ್ಯೆ ಬಳಿಕ ಅದನ್ನು ಆತ ಸ್ಕ್ರೀನ್‌ಶಾಟ್ ಮಾಡಿ ಇಟ್ಟುಕೊಂಡಿದ್ದ. ಇದು ಆತನ ಯೋಜನೆಯನ್ನು ಬಯಲು ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ನಡೆಯುವ ಮುನ್ನ ಅಮೇಥಿಯ ಪ್ರಸಿದ್ಧ ದೇವಸ್ಥಾನಕ್ಕೂ ಭೇಟಿ ನೀಡಿದ್ದ. ಅಲ್ಲದೇ ಹತ್ಯೆ ಬಳಿಕ ಆತ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಆರೋಪಿ ಚಂದನ್ ವರ್ಮಾ ಶಿಕ್ಷಕನ ಹೆಂಡತಿಯೊಂದಿಗೆ 18 ತಿಂಗಳ ಕಾಲ ಸಂಬಂಧ ಹೊಂದಿದ್ದನು. ಆಗಾಗ ಜಗಳ ಆಗುತ್ತಿತ್ತು. ಜಗಳ ವಿಕೋಪಕ್ಕೆ ಹೋದಾಗ ಚಂದನ್ ಶರ್ಮಾ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಘಟನೆಯ ಒಂದು ದಿನದ ನಂತರ ವರ್ಮಾ ದೆಹಲಿಗೆ ತೆರಳುತ್ತಿದ್ದಾಗ ನೋಯ್ಡಾದ ಟೋಲ್ ಪ್ಲಾಜಾ ಬಳಿ ಬಂಧಿಸಲಾಗಿದೆ.