ಅಹಮದಾಬಾದ್: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ ನಲ್ಲಿ ಆಸ್ಟ್ರೇಲಿಯಾ ತಂಡವು ಗೆಲುವು ಸಾಧಿಸಿ ದಾಖಲೆಯ ಆರನೇ ಬಾರಿಗೆ ವಿಶ್ವಕಪ್ ಗೆದ್ದುಕೊಂಡಿದೆ. ಫೈನಲ್ ಪಂದ್ಯದಲ್ಲಿ ಆತಿಥೇಯ ಭಾರತ ತಂಡವನ್ನು ಆರು ವಿಕೆಟ್ ಗಳಿಂದ ಸೋಲಿಸಿದ ಪ್ಯಾಟ್ ಕಮಿನ್ಸ್ ಪಡೆ ಮತ್ತೊಮ್ಮೆ ವಿಶ್ವ ಚಾಂಪಿಯನ್ ಎನಿಸಿತು.
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪಂದ್ಯಾವಳಿಯ ಕೊನೆಯಲ್ಲಿ ಒಟ್ಟು ಮೊತ್ತದ 10 ಮಿಲಿಯನ್ ಯುಎಸ್ ಡಾಲರ್ ಬಹುಮಾನದ ಮೊತ್ತವನ್ನು ನೀಡಲಾಗುತ್ತದೆ ಎಂದು ಘೋಷಿಸಲಾಗಿತ್ತು. ಅದರಂತೆ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡವು ನಾಲ್ಕು ಮಿಲಿಯನ್ ಯುಎಸ್ ಡಾಲರ್ (33 ಕೋಟಿ ರೂ) ಪ್ರಶಸ್ತಿ ಮೊತ್ತ ಪಡೆದಿದೆ.
ಎರಡನೇ ಪ್ರಶಸ್ತಿ ಪಡೆದ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಎರಡು ಮಿಲಿಯನ್ ಯುಎಸ್ ಡಾಲರ್ ಅಂದರೆ 16 ಕೋಟಿ ರೂ ಬಹುಮಾನದ ರೂಪದಲ್ಲಿ ಪಡೆದಿದೆ.
ಸೆಮಿ ಫೈನಲಿಸ್ಟ್ ಗಳಾದ ನ್ಯೂಜಿಲ್ಯಾಂಡ್ ಮತ್ತು ದಕ್ಷಿಣ ಆಫ್ರಿಕಾ 800,000 ಡಾಲರ್ ಅಂದರೆ ತಲಾ 6.6 ಕೋಟಿ ರೂಪಾಯಿಗಳೊಂದಿಗೆ ಸ್ವದೇಶಕ್ಕೆ ಮರಳಿದವು.