ಬಿಗ್ ಬಾಸ್ ಸೆಟ್ ನಲ್ಲಿ ಅರಳಿದ ಪ್ರೀತಿ ಬಲವಾಗಿ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಚಂದನ್ ಹಾಗೂ ನಿವೇದಿತಾ ಈಗ ಡಿವೋರ್ಸ್ ಪಡೆದಿದ್ದಾಗಿ ವರದಿಯಾಗಿದೆ. ಹಲವು ರಿಯಾಲಿಟಿ ಶೋಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡು ಮನೆ ಮಾತಾಗಿದ್ದ ಈ ಜೋಡಿ ಈಗ ಬೇರೆ ಬೇರೆಯಾಗುತ್ತಿರುವುದು ಖಚಿತವಾಗಿದೆ.

ಖ್ಯಾತ ಗಾಯಕ ಚಂದನ್ ಶೆಟ್ಟಿ ಮತ್ತು ರೀಲ್ಸ್ ಬೆಡಗಿ ನಿವೇದಿತಾ ಗೌಡ ಅವರ ಸಂಸಾರದಲ್ಲಿ ಬಿರುಕು ಉಂಟಾಗಿದೆ. ಬೆಂಗಳೂರಿನ ಶಾಂತಿನಗರದ ಕೌಟುಂಬಿಕ ನ್ಯಾಯಾಲಯದಲ್ಲಿ ಇಬ್ಬರೂ ಅರ್ಜಿ ಸಲ್ಲಿಸಿ ಡಿವೋರ್ಸ್ ಪಡೆದಿದ್ದಾರೆ. ವಿಚಾರಣೆ ಸಲುವಾಗಿ ಅವರು ಜೂನ್ 7ರಂದು ಕೋರ್ಟ್ಗೆ ಆಗಮಿಸಿದ್ದರು. ಚಂದನ್ ಮತ್ತು ನಿವೇದಿತಾ ಅವರಿಗೆ ಫ್ಯಾಮಿಲಿ ಕೋರ್ಟ್ ವಿಚ್ಛೇದನ ಮಂಜೂರು ಮಾಡಿದೆ. ಅಷ್ಟಕ್ಕೂ ಈ ದಂಪತಿಯ ನಡುವೆ ಕಿರಿಕ್ ಆಗಿದ್ದು ಯಾಕೆ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ.

2020ರ ಫೆಬ್ರವರಿಯಲ್ಲಿ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ಆಗಿ ನಾಲ್ಕು ವರ್ಷ ಕಳೆದರೂ ಕೂಡ ಅವರಿಬ್ಬರು ಮಗು ಪಡೆದಿರಲಿಲ್ಲ. ಮಗು ಹೊಂದುವ ವಿಚಾರಕ್ಕೆ ನಿವೇದಿತಾ ಗೌಡ ಅವರ ಒಪ್ಪಿಗೆ ಇರಲಿಲ್ಲ. ಆದ್ದರಿಂದ ದಂಪತಿ ನಡುವೆ ಬಿರುಕು ಮೂಡಿತು. ಹಾಗಾಗಿ ಅವರಿಬ್ಬರು ಡಿವೋರ್ಸ್ ಪಡೆದರು ಎಂಬ ಮಾಹಿತಿ ಕೇಳಿಬಂದಿದೆ. ಇನ್ನು ಟಿವಿ ರಿಯಾಲಿಟಿ ಶೋನಲ್ಲೂ ಮಗು ಮಾಡಿಕೊಳ್ಳಲ್ಲ ಎಂಬ ಮಾತುಗಳನ್ನೂ ಸಹ ನಿವೇದಿತಾ ಆಡಿದ್ದರು.

ಸಂಸಾರದಲ್ಲಿ ಮನಸ್ತಾಪ ಉಂಟಾದಾಗ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ನಡುವೆ ಸಂಧಾನ ಮಾಡಿಸಲು ಆಪ್ತರು ಪ್ರಯತ್ನಿಸಿದ್ದರು. ಸಂಧಾನ ಸಫಲವಾಗದ ಹಿನ್ನೆಲೆಯಲ್ಲಿ ಅವರಿಬ್ಬರು ಕೋರ್ಟ್ ಮೆಟ್ಟಿಲು ಏರಿದರು. ಈ ವಿಚಾರದಲ್ಲಿ ಅವರಿಬ್ಬರು ಮುನಿಸಿಕೊಂಡಿಲ್ಲ. ಬೆಂಗಳೂರಿನ 2ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾದಾಗ ಅವರಿಬ್ಬರು ಕೋರ್ಟ್ ಹಾಲ್ನಲ್ಲಿ ಪರಸ್ಪರ ನಗುತ್ತಲೇ ಅಕ್ಕಪಕ್ಕ ಕುಳಿತಿದ್ದರು! ಆದರೆ ಯಾವುದೇ ಕಾರಣಕ್ಕೂ ಜೊತೆಯಾಗಿ ಬಾಳಲು ಅವರು ಒಪ್ಪಲಿಲ್ಲ. ವಿಚ್ಛೇದನದ ಷರತ್ತುಗಳ ಬಗ್ಗೆ ಒಪ್ಪಂದ ಮಾಡಿಕೊಂಡರು. ಸೆಕ್ಷನ್ 13ಬಿ ಅಡಿಯಲ್ಲಿ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆದಿದ್ದಾರೆ.

2017ರಲ್ಲಿ ಪ್ರಸಾರ ಕಂಡ ‘ಬಿಗ್ ಬಾಸ್ ಕನ್ನಡ’ 5ನೇ ಸೀಸನ್ನಲ್ಲಿ ನಿವೇದಿತಾ ಗೌಡ-ಚಂದನ್ ಶೆಟ್ಟಿ ಪರಸ್ಪರ ಪರಿಚಯ ಆಗಿದ್ದರು. ಇಬ್ಬರ ಸ್ನೇಹ ನಂತರ ಪ್ರೀತಿಗೆ ತಿರುಗಿತು. ಮೈಸೂರು ಯುವ ದಸರಾ ವೇದಿಕೆಯಲ್ಲಿ ನಿವೇದಿತಾ ಗೌಡಗೆ ಚಂದನ್ ಶೆಟ್ಟಿ ಅವರು ಮ್ಯಾರೇಜ್ ಪ್ರಪೋಸ್ ಮಾಡಿದ್ದರು. ಆ ಘಟನೆಯಿಂದ ವಿವಾದ ಕೂಡ ಆಗಿತ್ತು. ಬಳಿಕ 2020ರಲ್ಲಿ ಅವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಹಲವು ರಿಯಾಲಿಟಿ ಶೋ ನಲ್ಲೂ ಜೊತೆ ಜೊತೆಗೆ ಹಾಗೂ ಪ್ರತ್ಯೇಕವಾಗಿ ಕಾಣಿಸಿಕೊಂಡು ಕರುನಾಡಿನ ಮಂದಿಗೆ ಚಿರಪರಿಚಿತರಾಗಿದ್ದರು.