ಕೇರಳ: ಕರ್ನಾಟಕದ ಗಡಿನಾಡು ಎಂದೇ ಖ್ಯಾತಿ ಪಡೆದ ಕಾಸರಗೋಡು ಜಿಲ್ಲೆಯ ಅನಂತಪುರ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿನ ನಿರುಪದ್ರ ಮೊಸಳೆಯಿಂದಲೇ ಜನಜನಿತ. ಅಂದು ಬ್ರಿಟೀಷರ ಗುಂಡಿಗೆ ಬಲಿಯಾಗಿತ್ತು ದೇವಸ್ಥಾನದ ಮೊಸಳೆ. ತದನಂತರ ಬಬಿಯಾ ಪ್ರತ್ಯಕ್ಷವಾಗಿತ್ತು. ಬಬಿಯಾ 13 ತಿಂಗಳ ಹಿಂದೆ ಅಂದರೆ 2022ರ ಅಕ್ಟೋಬರ್ 9 ರಂದು ನಿಧನವಾಗಿತ್ತು. ಆ ಸಂದರ್ಭದಲ್ಲೇ ಹೊಸ ಮೊಸಳೆಯ ನಿರೀಕ್ಷೆಯಲ್ಲಿದ್ದರು ಶ್ರೀ ಕ್ಷೇತ್ರದ ಭಕ್ತರು. ಈ ಭರವಸೆ ನಿಜವಾಗಿದೆ. ಕಲಿಯುಗದಲ್ಲೂ ಭಕ್ತರನ್ನು ಮತ್ತೆ ಭಕ್ತಿ ಪರವಶರನ್ನಾಗಿಸಿದೆ.
ನ.10 ರಂದು ಅನಂತಪುರ ದೇವಸ್ಥಾನಕ್ಕೆ ಬಂದಿದ್ದ ಕುಟುಂಬವೊಂದಕ್ಕೆ ಈ ಮೊಸಳೆ ಮೊದಲು ಕಾಣಸಿಕ್ಕಿದೆ. ಅವರು ದೇವಸ್ಥಾನದ ಆಡಳಿತ ಮಂಡಳಿ ಗಮನಕ್ಕೆ ತಂದರು. ಆದರೆ ಅವರು ಅಂತಹ ಸಾಧ್ಯತೆಯನ್ನು ನಿರಾಕರಿಸಿದ್ದರು. ಮೊಸಳೆ ಕಂಡರೆ ಹಳೆಯ ಸಂಪ್ರದಾಯವನ್ನು ಮುಂದುವರಿಸುವುದಾಗಿಯೂ ಸ್ಪಷ್ಟೀಕರಣ ನೀಡಿದ್ದರು.
ಆದರೆ, ಆ ಕುಟುಂಬ ಇಂದು ಪುನಃ ಅನಂತಪುರ ದೇವಸ್ಥಾನಕ್ಕೆ ಬಂದು ತಾವು ಕಣ್ಣಾರೆ ಆ ಮೊಸಳೆಯನ್ನು ನೋಡಿದ್ದಾಗಿ ಹೇಳಿದ್ದರು. ಇಂದು ಕೂಡ ಸರೋವರದ ಬಳಿ ತೆರಳಿ, ಅಲ್ಲಿ ಮೊಸಳೆ ಇರುವುದನ್ನು ಖಾತರಿಪಡಿಸಿಕೊಂಡು ಆಡಳಿತ ಮಂಡಳಿಯ ಗಮನಸೆಳೆದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಇದೇ ವಿಚಾರವನ್ನು ಕಣಿಪುರ ಮ್ಯಾಗಜಿನ್‌ನ ಎಂ. ನಾ. ಚಂಬಲ್ತಿಮಾರ್ ಅವರು ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
ಯಾರೇನೇ ಅನ್ನಲಿ..? ಇದು ಕಲಿಗಾಲದಲ್ಲೂ ಆವರ್ತಿಸಿದ ಪವಾಡವಲ್ಲದೇ ಮತ್ತೇನು…???
ಹೀಗಿದೆ ಬರಹ:
ನಮ್ಮೂರಿನ ಸರೋವರ ಕ್ಷೇತ್ರ ಅನಂತಪುರದಲ್ಲಿ ಭಕ್ತರ ಕರೆಗೆ ಓಗೊಡುತ್ತಿದ್ದ, ಕಣ್ಕಂಡ ದೈವಸದೃಶವಾಗಿದ್ದ ಸಸ್ಯಾಹಾರಿ ಮೊಸಳೆ ಬಬಿಯ ಬ್ರಹ್ಮೈಕ್ಯವಾಗಿ ಭರ್ತಿ ಒಂದು ವರ್ಷಾಂತಿಕ ದಾಟಿದ ಬೆನ್ನಲ್ಲೇ ಬರಿದಾಗಿದ್ದ ಕ್ಷೇತ್ರ ಸರೋವರದಲ್ಲಿ ಮತ್ತೊಂದು ಮರಿ ಮೊಸಳೆ ಕಂಡುಬಂದಿದೆ..!!
ಇದು ಪ್ರಪ್ರಥಮ ಕಾಣಸಿಕ್ಕುದಿದೇ ಕಾಞಂಗಾಡಿನಿಂದ ಬಂದ ಭಕ್ತ ಕುಟುಂಬಕ್ಕೆ.
ಇತ್ತೀಚಿಗೆ ಅವರು ಕ್ಷೇತ್ರಕ್ಕೆ ಬಂದಿದ್ದರು. ಇವರ ಜತೆಗಿದ್ದ ಮಗುವೊಂದು “ನನಗೆ ಮೊಸಳೆ ನೋಡಬೇಕೆಂದು” ರಚ್ಚೆ ಹಿಡಿಯಿತು. “ಮೊಸಳೆ ಇಲ್ಲಮಗಾ… ” ಅಮ್ಮ ಎಷ್ಟೇ ಸತಾಯಿಸಿದರೂ ಮಗು ಕೇಳಲಿಲ್ಲ.. ಇದೇ ಸಂದರ್ಭಕ್ಕೆ ಕ್ಷೇತ್ರದ ಗುಹೆಯಿಂದ ಮೊಸಳೆ ಹೊರಬರಬೇಕೇ…???!
ಅವರದನ್ನು ಮೊಬೈಲಿನಲ್ಲಿಚಿತ್ರಿಸಿದರು. ಕ್ಷೇತ್ರ ದ ಸಂಬಂಧಪಟ್ಟವರಿಗೆಲ್ಲ ತಿಳಿಸಿದ್ದರು. ಆದರೆ ಕ್ಷೇತ್ರದ ಸಿಬಂದಿಗಳಿಗೋ, ಭಕ್ತರಿಗೋ ಅದು ದರ್ಶನ ನೀಡಿರಲೇ ಇಲ್ಲ..!
ಈ ಕಾರಣದಿಂದಲೇ ಇದು ಜಿಜ್ಞಾಸೆಗೂ ಒಳಗಾಯಿತು. ಮೊಸಳೆಯೇ ಹೌದೋ.. ಎಂದು ಸಂದೇಹವೂ ಹುಟ್ಟಿತು. ವದಂತಿಗಳೂ ಹರಡಿತು.
ಈ ಕಾರಣದಿಂದಲೇ.. ಮೊಸಳೆಯನ್ನು ಮೊದಲ ಬಾರಿಗೆ ಕಂಡ ಕಾಞಂಗಾಡಿನ ಕುಟುಂಬ ಮತ್ತೆ ಅನಂತಪುರ ಕ್ಷೇತ್ರಕ್ಕೆ ಬಂದರು.
ಎರಡನೇ ಬಾರಿಗೂ ಅವರಿಗೆ ದರ್ಶನ ನೀಡುವುದರೊಂದಿಗೆ ಕ್ಷೇತ್ರದ ಅರ್ಚಕ, ಪರಿವಾರಕ್ಕೆಲ್ಲ ಮೊಸಳೆಯ ಮರಿ ಸ್ಪಷ್ಟವಾಗಿ ಕಾಣಸಿಕ್ಕಿದೆ.
ಇದರೊಂದಿಗೆ 75ವರ್ಷಗಳ ಕಾಲ ನಿರುಪದ್ರವಿಯಾಗಿ ಬದುಕಿದ್ದ “ಬಬಿಯ”ನ ಜಾಗಕ್ಕೆ ಮತ್ತೊಂದು ಮರಿ ಮೊಸಳೆ ತಾನಾಗಿಯೇ ಬಂದಂತಾಗಿದೆ!
ಹಿಂದೆ ಕೆರೆಯಲ್ಲಿದ್ದ ಮೊಸಳೆಯನ್ನು ಬ್ರಿಟೀಷರು ಗುಂಡಿಟ್ಟು ಕೊಂದಿದ್ದರಂತೆ. ತದನಂತರ ತಾನಾಗಿಯೇ ಮತ್ತೊಂದು ಮೊಸಳೆ ಇಲ್ಲಿ ಪ್ರತ್ಯಕ್ಷಗೊಂಡಿತ್ತು. ಆತನೇ ಇತ್ತೀಚಿಗೆ ಅಗಲಿದ ಬಬಿಯ. ಅದಗಲಿ ವರ್ಷವೊಂದು ಪೂರೈಸಿದಾಗಲೇ ಮರಿ ಮೊಸಳೆ ಗೋಚರವಾಗಿದೆ. ಕ್ಷೇತ್ರದ ಸಾನ್ನಿಧ್ಯವನ್ನು ಮತ್ತೆ ಎತ್ತಿ ಹಿಡಿದಿದೆ..
ಇದಲ್ಲವೇ ಈ ದೀಪಾವಳಿಯ ಸಂಭ್ರಮ??
ಹಾಗೆಂದು ಈ ಮರಿ ಮೊಸಳೆಗೆ ಜನರೊಂದಿಗೆ ಬೆಸೆದು, ಬೆರೆತು ಅಭ್ಯಾಸ ಆಗಿಲ್ಲ. ಇದು ಜನರ ಸದ್ದು ಕೇಳಿದರೆ ಪೊಟರೆಯೊಳಗೆ ಜಾರುತ್ತದೆ. ಯಾರಿಲ್ಲದಿದ್ದಾಗ ಅದೃಷ್ಟಶಾಲಿಯ ಕಣ್ಣಿಗೆ ಬೀಳುತ್ತದೆ. ಆತ ಅದೃಷ್ಟಶಾಲಿ..
ಒಟ್ಟಂದದಲ್ಲಿ ಬಬಿಯ ನ ಪುನರಾಗಮನದ ಪವಾಡ ಸದೃಶ ಘಟನೆಯಿಂದ ಭಕ್ತ ಮನಸುಗಳೆಲ್ಲ ಆನಂದ ತುಂದಿಲವಾಗಿದೆ..
- ಎಂ. ನಾ. ಚಂಬಲ್ತಿಮಾರ್