ಪಶ್ಚಿಮ ವಲಯ ಡಿಐಜಿಪಿ ಆಗಿ ಐಪಿಎಸ್ ಅಧಿಕಾರಿ ಅಮಿತ್ ಸಿಂಗ್ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಅವರು ಅಮಿತ್ ಸಿಂಗ್ ಅವರನ್ನು ಬರಮಾಡಿಕೊಂಡರು. ಅಮಿತ್ ಸಿಂಗ್ ಅವರು ಮಂಗಳೂರು ಮತ್ತು ಪುತ್ತೂರಿನಲ್ಲಿ ಎಎಸ್‌ಪಿಯಾಗಿ, ಹಾಸನ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ ನಾಲ್ಕು ವರ್ಷ ಕಾರ್ಯನಿರ್ವಹಿಸಿದ್ದರು. ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮಾದಕ ಪದಾರ್ಥ ಮಾರಾಟ ದಂಧೆ, ಕೋಮು ದ್ವೇಷ ಹರಡುವಿಕೆ ನಿಗ್ರಹಕ್ಕೆ ಆದ್ಯತೆ ನೀಡುತ್ತೇನೆ. ಸೈಬರ್ ಅಪರಾಧ ಚಟುವಟಿಕೆ ನಿಯಂತ್ರಣಕ್ಕೂ ಹೆಚ್ಚಿನ ನಿಗಾ ವಹಿಸಲಾಗುವುದು’ ಎಂದರು.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ಇದ್ದರು. ಈ ಹಿಂದಿನ ಡಿಐಜಿ ಚಂದ್ರಗುಪ್ತ ಅವರು ಬೆಂಗಳೂರು ಅಪರಾಧ ವಿಭಾಗದ ಐಜಿಪಿಯಾಗಿ ಬಡ್ತಿ ಪಡೆದಿದ್ದಾರೆ.