Tuesday, July 23, 2024

ರಸ್ತೆಗಳ ನಿರ್ಮಾಣಕ್ಕಾಗಿ ರಾಜ್ಯಕ್ಕೆ ₹8 ಸಾವಿರ ಕೋಟಿ ಮಂಜೂರು

ಹುಬ್ಬಳ್ಳಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ 2024-25ರ ವಾರ್ಷಿಕ ಯೋಜನೆಯಲ್ಲಿ ಕರ್ನಾಟಕ ರಾಜ್ಯದ ಒಟ್ಟು 470 ಕಿ.ಮೀ. ರಸ್ತೆ ಅಭಿವೃದ್ಧಿಗಾಗಿ ₹8,006 ಕೋಟಿಗಳನ್ನು ಮಂಜೂರು ಮಾಡಿದ್ದಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.

ಉಳಿದಂತೆ ಹೊಸದಾಗಿ 459 ಕಿ.ಮೀ. ಉದ್ದದ ಹೊಸ ರಸ್ತೆ ನಿರ್ಮಾಣಕ್ಕೆ ವಿಸ್ತ್ರತ ಯೋಜನಾ ವರದಿಯನ್ನು (ಡಿ.ಪಿ.ಆರ್.) ಸಿದ್ಧಪಡಿಸಲು ₹ 15 ಕೋಟಿ ಮಂಜೂರು ಮಾಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ವಿತರಣಾ ಗ್ರಾಹಕ ವ್ಯವಹಾರಗಳು ಮತ್ತು ನವೀಕರಿಸಬಹುದಾದ ಇಂಧನ ಖಾತೆಯ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರಸ್ತೆಗಳ ಅಭಿವೃದ್ಧಿ ಹಾಗೂ ಸುಗಮ ಸಂಚಾರಕ್ಕೆ ಮಹತ್ವ ನೀಡಿದೆ. ಬೈಪಾಸ್ ರಸ್ತೆ ನಿರ್ಮಾಣಕ್ಕಾಗಿ ಈ ಹಿಂದೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಕಾಮಗಾರಿಗೆ ಅನುಮೋದನೆ ದೊರಕಿದೆ. ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದು, ಈ ಭಾಗದ ಜನರ ಬಹುಕಾಲದ ಬೇಡಿಕೆಯೊಂದು ಶೀಘ್ರವೇ ಈಡೇರಲಿದೆ ಎಂದು ಹೇಳಿದ್ದಾರೆ.

ಇದರಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ನವಲಗುಂದ ಪಟ್ಟಣದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 52ಕ್ಕೆ 12 ಕಿ.ಮೀ ಉದ್ದದ ಬೈಪಾಸ್ ನಿರ್ಮಾಣಕ್ಕಾಗಿ ₹350 ಕೋಟಿ ಮಂಜೂರು ಮಾಡಿದೆ.

ಇದರ ಜೊತೆಗೆ ಹುಬ್ಬಳ್ಳಿಯ ಕಿತ್ತೂರು ಚನ್ನಮ್ಮ ವೃತ್ತದಿಂದ ಬೆಂಗಳೂರು ಮಾರ್ಗದಲ್ಲಿ ಬಂಕಾಪುರ ಚೌಕ್ ಬಿಡ್ನಾಳ ಕ್ರಾಸ್‌ವರೆಗೆ ವಿಸ್ತರಿಸುವ ಎಲಿವೇಟೆಡ್ ಕಾರಿಡಾರ್ ಕಾಮಗಾರಿಯ ವಿಸ್ತ್ರತ ಯೋಜನಾ ವರದಿ ತಯಾರಿಗಾಗಿ ₹ 25ಲಕ್ಷ ಮತ್ತು ಕುಸುಗಲ್‌ನಿಂದ ನರೇಂದ್ರ ಕ್ರಾಸ್ ವರೆಗಿನ ವರ್ತುಳ ರಸ್ತೆಯ ಕಾಮಗಾರಿಯ ವಿಸ್ಕೃತ ಯೋಜನಾ ವರದಿ ತಯಾರಿಗಾಗಿ ₹41ಲಕ್ಷ ಕೂಡಾ ತೆಗೆದಿರಿಸಲಾಗಿದೆ ಎಂದು ತಿಳಿಸಿದ್ದಾರೆ.

Related Articles

Latest Articles