ನಟ ಶಾರುಖ್ ಖಾನ್ ಅವರು ಇಂದು ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಅವರ ಬಳಿ ಸಾವಿರಾರು ಕೋಟಿ ರೂಪಾಯಿ ಆಸ್ತಿ ಇದೆ. ಐಷಾರಾಮಿ ಕಾರು, ಬಂಗಲೆ ಇದೆ. ಆದರೆ ಆರಂಭದ ದಿನಗಳಲ್ಲಿ ಇದ್ಯಾವುದೂ ಅವರ ಬಳಿ ಇರಲಿಲ್ಲ. ಅವರ ಜೊತೆ ಮೊದಲಿನಿಂದಲೂ ಸ್ನೇಹ ಹೊಂದಿರುವ ನಟಿ ಜೂಹಿ ಚಾವ್ಲಾ ಈಗ ಅಚ್ಚರಿಯ ವಿಷಯ ತಿಳಿಸಿದ್ದಾರೆ. ಶಾರುಖ್ ಖಾನ್ ಅವರು ಕಾರಿನ ಇಎಂಐ ಕಟ್ಟಲು ಕೂಡ ಕಷ್ಟಪಡುತ್ತಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ.

ಶಾರುಖ್ ಅವರನ್ನು ಹತ್ತಿರದಿಂದ ಕಂಡವರಲ್ಲಿ ಜೂಹಿ ಕೂಡ ಪ್ರಮುಖರು. ಸಿನಿಮಾಗಳಲ್ಲಿ ಅವರು ಜೋಡಿಯಾಗಿ ನಟಿಸಿದ್ದಾರೆ. ಅಲ್ಲದೇ ಬಿಸ್ನೆಸ್ ಪಾರ್ಟ್ನರ್ ಕೂಡ ಹೌದು. ಕೊಲ್ಕತ್ತ ನೈಟ್ ರೈಡರ್ಸ್ ತಂಡದ ಮಾಲಿಕತ್ವವನ್ನು ಶಾರುಖ್ ಖಾನ್ ಮತ್ತು ಜೂಹಿ ಚಾವ್ಲಾ ಹೊಂದಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಜೂಹಿ ಚಾವ್ಲಾ ಅವರು ಹಳೇ ದಿನಗಳ ಬಗ್ಗೆ ಮಾತನಾಡಿದ್ದಾರೆ.

‘ಶಾರುಖ್ ಖಾನ್ ಬಳಿ ಕಪ್ಪು ಬಣ್ಣದ ಒಂದು ಜಿಪ್ಸಿ ಇತ್ತು. ಅದರ ಇಎಂಐ ಕಟ್ಟಲಿಲ್ಲ ಎಂಬ ಕಾರಣಕ್ಕೆ ಒಂದು ದಿನ ಅದನ್ನು ಸೀಜ್ ಮಾಡಿದರು. ಆ ದಿನ ಶಾರುಖ್ ಖಾನ್ ತುಂಬ ಬೇಸರದಲ್ಲಿ ಶೂಟಿಂಗ್ಗೆ ಬಂದರು. ಚಿಂತೆ ಮಾಡಬೇಡಿ, ನೀವು ಒಂದು ದಿನ ಹಲವು ಕಾರುಗಳನ್ನು ಖರೀದಿಸುತ್ತೀರಿ ಅಂತ ನಾನು ಅವರಿಗೆ ಸಮಾಧಾನ ಮಾಡಿದ್ದೆ. ಅದನ್ನು ಅವರು ಈಗಲೂ ನೆನಪಿಟ್ಟುಕೊಂಡಿದ್ದಾರೆ. ಅದು ನಿಜ ಕೂಡ. ಈಗ ಅವರು ಹೇಗಿದ್ದಾರೆ ನೋಡಿ’ ಎಂದು ಜೂಹಿ ಚಾವ್ಲಾ ಹೇಳಿದ್ದಾರೆ.

ಆರಂಭದಲ್ಲಿ ಶಾರುಖ್ ಖಾನ್ ಅವರಿಗೆ ಮುಂಬೈನಲ್ಲಿ ಸ್ವಂತ ಮನೆ ಇರಲಿಲ್ಲ. ಆ ಬಗ್ಗೆಯೂ ಜೂಹಿ ಚಾವ್ಲಾ ಅವರು ಮಾತಾಡಿದ್ದಾರೆ. ‘ಶಾರುಖ್ ಖಾನ್ ಅವರಿಗೆ ಮುಂಬೈನಲ್ಲಿ ಮನೆ ಇಲ್ಲದ ಆ ದಿನಗಳು ಕೂಡ ನನಗೆ ನೆನಪಿದೆ. ಶೂಟಿಂಗ್ಗಾಗಿ ದೆಹಲಿಯಿಂದ ಬರುತ್ತಿದ್ದ ಅವರು ಮುಂಬೈನಲ್ಲಿ ಎಲ್ಲಿ ಉಳಿದುಕೊಳ್ಳುತ್ತಿದ್ದರೋ ಗೊತ್ತಿಲ್ಲ. ಊಟ, ತಿಂಡಿ ಶೂಟಿಂಗ್ ಸೆಟ್ನಲ್ಲಿ ಮಾಡುತ್ತಿದ್ದರು. 2-3 ಶಿಫ್ಟ್ಗಳಲ್ಲಿ ಕೆಲಸ ಮಾಡುತ್ತಿದ್ದರು’ ಎಂದಿದ್ದಾರೆ ಜೂಹಿ ಚಾವ್ಲಾ.