ಮಳೆಯ ನೀರು ಸಾಗಿ ಹೋಗುವ ಮೋರಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾದ ಘಟನೆ ವರದಿಯಾಗಿದೆ. ನೂರಾರು ಮಂದಿಗೆ ನೋಡ ನೋಡುತ್ತಲೇ ₹500 ನೋಟುಗಳು ಸಿಕ್ಕಿವೆ. ಪ್ರತಿಯೊಬ್ಬರಿಗೂ 1 ಸಾವಿರ, 5 ಸಾವಿರ, 10, 50 ಸಾವಿರದವರೆಗೂ ನೋಟುಗಳು ಸಿಕ್ಕಿವೆ. ಎಲ್ಲರ ಮುಖದಲ್ಲೂ ಖುಷಿ, ಇರುಸು ಮುರುಸು ಅನಿಸಿದ್ದು ಕೈಗಂಟ್ಟಿದ್ದ ಕೆಸರು ಮಾತ್ರ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಅಟಪಡಿ ಬಳಿಯ ಮೋರಿಯಲ್ಲಿ ₹500 ನೋಟುಗಳು ತೇಲಾಡುತ್ತಿದ್ದವು. ಮೊದಲಿಗೆ ನಕಲಿ ನೋಟು ಅಂದುಕೊಂಡಿದ್ದರು. ತೀರಾ ಒಂದು ನೋಟನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಮೇಲೆಯೇ ಇದು ಅಸಲಿ ನೋಟು ಅನ್ನುವುದು ಗೊತ್ತಾಗಿದೆ. ಸಿಕ್ಕಿದ್ದೇ ಅದೃಷ್ಟ ಅಂತ ಹಣವನ್ನು ಜೇಬಿಗೆ ಹಾಕಿಕೊಂಡಿದ್ದಾರೆ.
ಈ ಕ್ಷಣಕ್ಕೂ ಅಲ್ಲಿ ಹಣ ತೆಗೆದುಕೊಂಡವರು ಅಚ್ಚರಿಗೊಂಡಿದ್ದಾರೆ. ಇಷ್ಟೊಂದು ನೋಟುಗಳನ್ನು ನೀರಿಗೆ ಎಸೆದಿದ್ದು ಯಾರು? ಅನ್ನೋ ಯೋಚನೆ ಮಾಡುತ್ತಿದ್ದಾರೆ. ಸುಮಾರು 2 ರಿಂದ 2.5 ಲಕ್ಷದಷ್ಟು ₹500ರ ನೋಟುಗಳು ಮೋರಿಯಲ್ಲಿ ಸಿಕ್ಕಿವೆ. ಕೆಲವರಂತೂ ತಮಗೆ ಸಿಕ್ಕ ಹಣ ಎಷ್ಟು ಅನ್ನುವುದನ್ನೂ ಹೇಳುತ್ತಿಲ್ಲ. ಒಂದು ವೇಳೆ ಪೊಲೀಸರು ಬಂದು ವಾಪಾಸ್ ಪಡೆಯಬಹುದು ಅನ್ನುವ ಭಯದಲ್ಲಿದ್ದಾರೆ. ಹಾಗಾಗಿಯೇ ಇಲ್ಲಿ ಅಚಾನಕ್ ಆಗಿ ಸಿಕ್ಕಿರುವ ಹಣ 2.5 ಲಕ್ಷಕ್ಕಿಂತಲೂ ಹೆಚ್ಚು ಎಂದೇ ಭಾವಿಸಲಾಗಿದೆ. ಅಲ್ಲದೇ, ಈ ಹಣದ ವಾರಸುದಾರರು ಯಾರು ಅನ್ನುವ ಪ್ರಶ್ನೆಗೆ ಉತ್ತರವೂ ಸಿಕ್ಕಿಲ್ಲ.