Monday, December 9, 2024

ಭಾರತ vs ಸೌತ್ ಆಫ್ರಿಕಾ ನಡುವಣ 2ನೇ ಪಂದ್ಯ ರದ್ದು..!

ಭಾರತ ಮತ್ತು ಸೌತ್ ಆಫ್ರಿಕಾ ಮಹಿಳಾ ತಂಡಗಳ ನಡುವಣ 2ನೇ ಟಿ20 ಪಂದ್ಯವು ಮಳೆಯ ಕಾರಣ ರದ್ದಾಗಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾನುವಾರ ನಡೆಯಬೇಕಿದ್ದ ಈ ಪಂದ್ಯದ 2ನೇ ಇನಿಂಗ್ಸ್ ವೇಳೆ ಧಾರಾಕಾರ ಮಳೆಯಾಗಿತ್ತು.

ಹೀಗಾಗಿ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕಿ ಹರ್ಮನ್​ಪ್ರೀತ್ ಕೌರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ಪರ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು.

ಆರಂಭಿಕರಾದ ಲಾರಾ ವೊಲ್ವಾರ್ಡ್ಟ್ ಹಾಗೂ ತಜ್ಮಿನ್ ಬ್ರಿಟ್ಸ್ ಮೊದಲ ವಿಕೆಟ್​ಗೆ 43 ರನ್​ಗಳ ಜೊತೆಯಾಟವಾಡಿದರು. ಈ ವೇಳೆ ಪೂಜಾ ವಸ್ತ್ರಾಕರ್ ಎಸೆತದಲ್ಲಿ ಲಾರಾ (22) ಔಟಾದರು. ಮತ್ತೊಂದೆಡೆ ಉತ್ತಮ ಬ್ಯಾಟಿಂಗ್ ಮುಂದುವರೆಸಿದ ತಜ್ಮಿನ್ 39 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ 52 ರನ್​ ಬಾರಿಸಿದರು.

ಇನ್ನು ಅನ್ನೆಕೆ ಬಾಷ್ 40 ರನ್​ಗಳ ಕೊಡುಗೆ ನೀಡಿದರೆ, ಮರಿಝನ್ನೆ ಕಪ್ 20 ರನ್​ ಬಾರಿಸಿದರು. ಈ ಮೂಲಕ ಸೌತ್ ಆಫ್ರಿಕಾ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 177 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಲು ಸಿದ್ಧರಾಗಿದ್ದ ಟೀಮ್ ಇಂಡಿಯಾಗೆ ಬ್ಯಾಟಿಂಗ್ ಮಾಡಲು ವರುಣ ಅವಕಾಶವೇ ನೀಡಲಿಲ್ಲ. ಎರಡನೇ ಇನಿಂಗ್ಸ್ ಆರಂಭಕ್ಕೂ ಮುನ್ನವೇ ಸತತ ವರ್ಷಧಾರೆಯಾಗಿದ್ದ ಕಾರಣ ಮೈದಾನವು ಸಂಪೂರ್ಣ ಒದ್ದೆಯಾಗಿತ್ತು. ಹೀಗಾಗಿ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ.

Related Articles

Latest Articles