Monday, October 14, 2024

ಭೂಮಿಗೆ ಅಪ್ಪಳಿಸುತ್ತಾ ಪ್ರಳಯಾಂತಕ ಅಪೋಫಿಸ್ ಕ್ಷುದ್ರ ಗ್ರಹ? ಇಸ್ರೋ ಅಧ್ಯಯನ ಆರಂಭ

2029ರ ಏಪ್ರಿಲ್ 13 ರಂದು ಭೂಮಿಯ ಬಳಿಗೆ ಬರಲಿರುವ ಕ್ಷುದ್ರ ಗ್ರಹ ಅಪೋಫಿಸ್ ಇದೀಗ ವೈಜ್ಞಾನಿಕ ವಲಯವನ್ನು ಬಡಿದೆಬ್ಬಿಸಿದೆ. ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಕೂಡಾ ಈ ಕ್ಷುದ್ರ ಗ್ರಹ ಹಾದು ಹೋಗುವ ಹಾದಿಯ ಕುರಿತಾಗಿ ಅಧ್ಯಯನ ಆರಂಭಿಸಿದೆ.

ಭಾರೀ ಗಾತ್ರದ ಈ ಕ್ಷುದ್ರ ಗ್ರಹ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಆದಾಗ್ಯೂ ಇಷ್ಟು ಗಾತ್ರದ ಕ್ಷುದ್ರ ಗ್ರಹ ಇದೇ ಮೊದಲ ಬಾರಿಗೆ ಭೂಮಿಗೆ ಸಾಕಷ್ಟು ಸಮೀಪಕ್ಕೆ ಬರುತ್ತಿದೆ ಎಂದು ತಜ್ಞರು ಹೆಳಿದ್ದಾರೆ.

ಈಜಿಪ್ಟ್‌ ಸಂಪ್ರದಾಯದ ಪ್ರಕಾರ ಅಲ್ಲೋಲ ಕಲ್ಲೋಲ ಸೃಷ್ಟಿಸುವ ದೇವರ ಹೆಸರು ಅಪೋಫಿಸ್. ಇದೀಗ ಈ ಹೆಸರನ್ನೇ ಕ್ಷುದ್ರ ಗ್ರಹಕ್ಕೂ ನೀಡಲಾಗಿದೆ. ಈ ಕ್ಷುದ್ರ ಗ್ರಹ ಭೂಮಿಯ ಬಳಿಗೆ ಬರಲು ಇನ್ನೂ ಸುಮಾರು 5 ವರ್ಷ ಸಮಯವಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಇಸ್ರೋ ಅಧ್ಯಕ್ಷ ಡಾ. ಎಸ್. ಸೋಮನಾಥ್, ಬಾಹ್ಯಾಕಾಶ ವಸ್ತುಗಳ ಪರಿಶೀಲನೆ ಹಾಗೂ ಸಂಶೋಧನೆಗಾಗಿ ರೂಪುಗೊಂಡಿರುವ ಅಂತಾರಾಷ್ಟ್ರೀಯ ಸಂಘಟನೆ ಜೊತೆ ಇಸ್ರೋ ಇದೆ. ನಾವು ಅಪೋಫಿಸ್ ಕ್ಷುದ್ರ ಗ್ರಹವನ್ನು ತುಂಬಾ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಒಂದೊಮ್ಮೆ ಏನಾದ್ರೂ ಅಪಾಯ ಎದುರಾದರೆ ನಾವು ಅಂತಾರಾಷ್ಟ್ರೀಯ ಮಟ್ಟದ ಕಾರ್ಯಾಚರಣೆಗೆ ಕೈ ಜೋಡಿಸುತ್ತೇವೆ. ಏಕೆಂದರೆ ನಮಗೆ ಇರೋದು ಇದೊಂದೇ ಭೂಮಿ ಎಂದು ಸೋಮನಾಥ್ ಹೇಳಿದ್ದಾರೆ.

ಇನ್ನು ಭೂಮಿಯ ಸುತ್ತಾ ತಮ್ಮದೇ ಆದ ಕಕ್ಷೆಗಳಲ್ಲಿ ಸುತ್ತುತ್ತಿರುವ ಉಪಗ್ರಹಗಳಿಗಿಂತ ಮೇಲ್ಮಟ್ಟದಲ್ಲೇ ಈ ಕ್ಷುದ್ರ ಗ್ರಹ ಹಾದು ಹೋಗುವ ಸಾಧ್ಯತೆ ಇದೆ. ಭೂಮಿಯಿಂದ 32 ಸಾವಿರ ಕಿ. ಮೀ. ದೂರದಲ್ಲಿ ಈ ಕ್ಷುದ್ರ ಗ್ರಹ ಹಾದು ಹೋಗುವ ಸಾಧ್ಯತೆ ಇದೆ. ಇಷ್ಟು ಕಡಿಮೆ ದೂರದಲ್ಲಿ ಈ ಹಿಂದೆ ಯಾವುದೇ ಕ್ಷುದ್ರ ಗ್ರಹ ಹಾದು ಹೋಗಿರಲಿಲ್ಲ ಅನ್ನೋದು ಗಮನಾರ್ಹ ಸಂಗತಿ.

ಸುಮಾರು 340 ರಿಂದ 450 ಮೀಟರ್ ಉದ್ದದ ಈ ಕ್ಷುದ್ರ ಗ್ರಹ, 140 ಮೀಟರ್ ಅಗಲ ಹೊಂದಿದೆ. ಇಸ್ರೋ ನೀಡಿರುವ ಮಾಹಿತಿ ಪ್ರಕಾರ 300 ಮೀಟರ್‌ಗಿಂತಲೂ ದೊಡ್ಡ ಕ್ಷುದ್ರ ಗ್ರಹಗಳು ಭೂಖಂಡಕ್ಕೇ ಹಾನಿ ಮಾಡುವಷ್ಟು ಪ್ರಬಲವಾಗಿರುತ್ತವೆ. ಒಂದು ವೇಳೆ 10 ಕಿ. ಮೀ. ಗಿಂತಲೂ ಹೆಚ್ಚು ವ್ಯಾಸದ ಕ್ಷುದ್ರ ಗ್ರಹ ಭೂಮಿಗೆ ಅಪ್ಪಳಿಸಿದರೆ ಸಾಮೂಹಿಕ ವಿನಾಶಕ್ಕೆ ಕಾರಣ ಆಗಲಿದೆ.

ಅಪೋಫಿಸ್ ಕ್ಷುದ್ರ ಗ್ರಹವು ಭಾರತೀಯ ನೌಕಾ ಪಡೆಯ ಯುದ್ದ ನೌಕೆ ವಿಕ್ರಮಾದಿತ್ಯಗಿಂತಲೂ ದೊಡ್ಡದು! ಭಾರತದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂಗಿಂತಲೂ ದೊಡ್ಡದು!

Related Articles

Latest Articles