ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರವು ಜನವರಿ 22 ರಂದು ಲೋಕಾರ್ಪಣೆಯಾಗಲಿದೆ. ರಾಮ ಜನ್ಮ ಭೂಮಿಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು. ಅಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಟೆಯಾಗಬೇಕು ಎನ್ನುವ ಕೋಟ್ಯಾಂತರ ರಾಮಭಕ್ತರ ವರ್ಷಗಳ ಕನಸು ಇದೀಗ ನನಸಾಗುತ್ತಿದೆ.

ಈ ಐತಿಹಾಸಿಕ ಕ್ಷಣಕ್ಕಾಗಿ ಪ್ರತಿಯೊಬ್ಬ ಭಾರತೀಯನೂ ಕಾಯುತ್ತಿದ್ದಾನೆ. ಈ ವಿಶೇಷ ಸಂದರ್ಭದಲ್ಲಿ ಅಯೋಧ್ಯೆ ರಾಮ ಮಂದಿರದಲ್ಲಿ 7000 ಕೆಜಿ ಹಲ್ವಾವನ್ನು ಪ್ರಸಾದ ರೂಪದಲ್ಲಿ ತಯಾರಿಸಲಾಗುವುದು. ಈ ಪ್ರಸಾದವನ್ನು ರಾಮ ಭಕ್ತರಿಗೆ ವಿತರಣೆ ಮಾಡಲಾಗುತ್ತದೆ.

ರಾಮಮಂದಿರ ಉದ್ಘಾಟನೆ ವೇಳೆ ಪ್ರಸಾದ ರೂಪದಲ್ಲಿ ತಯಾರಾಗುತ್ತಿರುವ ಹಲ್ವಾ ಬರೋಬ್ಬರಿ 7000 ಕೆಜಿ. ನಾಗ್ಪುರದ ವಿಷ್ಣು ಮನೋಹರ್ ಎನ್ನುವವರು ಈ ಬೃಹತ್ ಮೊತ್ತದ ಹಲ್ವಾ ಮಾಡುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಹೌದು, 1.5 ಲಕ್ಷ ರಾಮ ಭಕ್ತರಿಗೆ ರುಚಿಕರವಾದ ಹಲ್ವಾವನ್ನು ಇವರೇ ತಯಾರಿಸುತ್ತಿದ್ದಾರೆ.ಇಷ್ಟು ದೊಡ್ಡ ಪ್ರಮಾಣದಲ್ಲಿ ಸಿದ್ದವಾಗುತ್ತಿರುವ ಹಲ್ವಾಕ್ಕಾಗಿ ನಾಗಪುರದಿಂದ ಕಡಾಯಿ ಕೂಡಾ ತರಿಸಲಾಗಿದೆ. ಸರಿಸುಮಾರು 1400 ಕೆ.ಜಿ. ತೂಕದ ಕಡಾಯಿಯಲ್ಲಿ ಈ ಪ್ರಸಾದ ತಯಾರಾಗಲಿದೆ.

ಈ ಹಲ್ವಾ ತಯಾರಿಸಲು 900 ಕೆಜಿ ರವೆ, 1000 ಕೆಜಿ ಸಕ್ಕರೆ, 2500 ಲೀಟರ್ ಹಾಲು, 300 ಕೆಜಿ ಡ್ರೈ ಫ್ರೂಟ್ಸ್, 1000 ಕೆಜಿ ತುಪ್ಪ ಮತ್ತು 2500 ಲೀಟರ್ ನೀರನ್ನು ಬಳಸುತ್ತಾರೆ. ಇಷ್ಟು ಸಾಮಾಗ್ರಿಗಳನ್ನು ಬೆರೆಸಿ ಹಲ್ವಾವನ್ನು ತಯಾರಿಸುವ ಪರಿ ನಿಜಕ್ಕೂ ಅದ್ಭುತವಾಗಿರಲಿದೆ.

ಹಾಗಿದ್ದರೆ ರಾಮ ಭಕ್ತರಿಗೆ ಪ್ರಸಾದ ತಾಯಾರಿಸುತ್ತಿರುವ ವಿಷ್ಣು ಮನೋಹರ್ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಳ್ಳೋಣ. ವಿಷ್ಣು ಒಬ್ಬ ಅದ್ಭುತ ಮಿಠಾಯಿಗಾರ. ಇಲ್ಲಿಯವರೆಗೆ ತಮ್ಮ ಹೆಸರಿಗೆ 12 ವಿಶ್ವ ದಾಖಲೆಗಳನ್ನು ಸೇರಿಸಿಕೊಂಡಿದ್ದಾರೆ. ಕಳೆದ ಬಾರಿ 285 ನಿಮಿಷಗಳಲ್ಲಿ 75 ಬಗೆಯ ಅಕ್ಕಿಯಿಂದ 75 ವಿವಿಧ ಭಕ್ಷ್ಯಗಳನ್ನು ತಯಾರಿಸಿದ್ದರು. ಅವರು ಲೈವ್ ಕುಕಿಂಗ್ ಕ್ಲಾಸ್ ಗಳನ್ನೂ ಕೂಡಾ ತೆಗೆದುಕೊಳ್ಳುತ್ತಾರೆ. ಹೊಸ ಹೊಸ ಪಾಕವಿಧಾನಗಳನ್ನು ಪ್ರಯತ್ನಿಸುತ್ತಲೇ ಇರುತ್ತಾರೆ. ಇದೀಗ ಅವರ ಕೈಯಿಂದ ತಯಾರಾಗುತ್ತಿರುವ ಹಲ್ವಾ ರಾಮ್ ಭಕ್ತರಿಗೆ ಪ್ರಸಾದವಾಗಿ ಸಿಗಲಿದೆ.
