ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ-3 ಲ್ಯಾಂಡರ್, ವಿಕ್ರಮ್ ಮತ್ತು ಪ್ರಗ್ಯಾನ್ ರೋವರ್ ತಮ್ಮ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಚಂದ್ರನ ಮೇಲ್ಮೈಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಅತ್ಯದ್ಬುತವಾದ ಹೈ-ರೆಸಲ್ಯೂಶನ್ ಚಿತ್ರಗಳನ್ನು ಸೆರೆಹಿಡಿದಿದೆ.
ಈ ಹೈ ರೆಸಲ್ಯೂಶನ್ ಚಿತ್ರವನ್ನು ಸೆರೆ ಹಿಡಿದಿದ್ದು ಚಂದ್ರಯಾನ ೨ ರ OHRC. ಅಂದರೆ ಆರ್ಬಿಟರ್ ಹೈ ರೆಸಲ್ಯೂಶನ್ ಕಾಮೆರಾ. ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಸಂಶೋಧಕ ಚಂದ್ರ ತುಂಗತುರ್ಥಿ ಅವರು ಚಿತ್ರವನ್ನು ಲಗತ್ತಿಸಿದ್ದಾರೆ.
2023ರ ಆಗಸ್ಟ್ 23 ರಂದು ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಞಾನ್ ರೋವರ್ ಚಂದ್ರನ ನೆಲದ ಮೇಲೆ ಇಳಿದ ಬಳಿಕ ಇಸ್ರೋ ಐತಿಹಾಸಿಕ ಫೋಟೋವನ್ನು ಹಂಚಿಕೊಂಡಿತ್ತು. ಆದರೆ, ಹೊಸ ಚಿತ್ರಗಳಲ್ಲಿ ಆರಂಭಿಕ ಚಿತ್ರಗಳು ತೋರಿಸಿದ್ದಕ್ಕಿಂತ ಈ ಪ್ರದೇಶದ ಹೆಚ್ಚಿನ ವಿವರಗಳನ್ನು ತೋರಿಸಿವೆ. ಹೊಸ ಚಿತ್ರಗಳನ್ನು ಮೇಲ್ಮೈ ಪ್ರದೇಶದಿಂದ 65 ಕಿಲೋಮೀಟರ್ ಎತ್ತರದಿಂದ ತೆಗೆದುಕೊಳ್ಳಲಾಗಿದೆ. ಇದು ಪ್ರತಿ ಪಿಕ್ಸೆಲ್‌ಗೆ ಸುಮಾರು 17 ಸೆಂಟಿಮೀಟರ್‌ಗಳ ರೆಸಲ್ಯೂಶನ್‌ಗೆ ಅನುವು ಮಾಡಿಕೊಡುತ್ತದೆ. ಆದರೆ, ಇಸ್ರೋ ಹಂಚಿಕೊಂಡ ಲ್ಯಾಂಡಿಂಗ್ ನಂತರದ ಚಿತ್ರಗಳಲ್ಲಿ 100 ಕಿಲೋಮೀಟರ್ ಮೇಲಿನಿಂದ ಪ್ರತಿ ಪಿಕ್ಸೆಲ್‌ಗೆ 26 ಸೆಂಟಿಮೀಟರ್ ರೆಸಲ್ಯೂಶನ್ ಹೊಂದಿರುವ ಚಿತ್ರ ಇದಾಗಿತ್ತು.
ಎರಡು ಸೆಟ್‌ಗಳ ಚಿತ್ರಗಳನ್ನು ಅಕ್ಕಪಕ್ಕದಲ್ಲಿ ಗಮನಿಸಿದಾಗ ರೆಸಲ್ಯೂಶನ್‌ನಲ್ಲಿನ ವ್ಯತ್ಯಾಸವು ಸ್ಪಷ್ಟವಾಗಿ ಗೋಚರಿಸುತ್ತದೆ. ವರ್ಧಿತ ಸ್ಪಷ್ಟತೆಯು ಪ್ರಗ್ಯಾನ್ ರೋವರ್‌ನ ಎದ್ದುಕಾಣುವ ನೋಟವನ್ನು ನೀಡಿದೆ. ಇದು ಚಂದ್ರನ ದಕ್ಷಿಣ ಧ್ರುವದ ಬಳಿ ಮೊದಲ ಬಾರಿಗೆ ಸಂಚರಿಸಿದ ಸಣ್ಣ ಭಾರತೀಯ ರೋವರ್ ಎನಿಸಿದೆ.