ಪುರಾಣದಲ್ಲಿ ವಾಸುಕಿ ಸರ್ಪದ ಕಥೆಗಳನ್ನ ನಾವು ನೀವು ಕೇಳಿದ್ದೇವೆ.. ಇಂತಹ ಬೃಹತ್ ಸರ್ಪ ನಿಜವಾಗಿಯೂ ಇತ್ತಾ? ಇತ್ತು ಅಂತಿದೆ ಇತ್ತೀಚಿಗಿನ ಉತ್ಖನನ. ಹೌದು, ಭಾರತದಲ್ಲಿ ವಾಸವಿದ್ದ ಅತಿದೊಡ್ಡ ಹಾವಿನ ಪಳೆಯುಳಿಕೆಗಳು ಪತ್ತೆಯಾಗಿದೆ. ಅನಕೊಂಡಾಗಿಂತಲೂ ದೈತ್ಯದ್ದು ಎಂದು ಅಂದಾಜಿಸಲಾಗಿದೆ.
ವಾಸುಕಿ ನಾಗ.. ಹಿಂದೂಧರ್ಮದಲ್ಲಿ ಈ ಸರ್ಪ ವಿಶೇಷ ನಂಬಿಕೆ ಒಳಗೊಂಡಿದೆ. ಸಮುದ್ರ ಮಂಥನದ ಸಮಯದಲ್ಲಿ, ದೇವತೆಗಳು ಮತ್ತು ಅಸುರರು ಇದೇ ವಾಸುಕಿ ಸರ್ಪವನ್ನು ಹಗ್ಗವಾಗಿ ಬಳಸಿ ಮೇರು ಪರ್ವತವನ್ನು ಮಂಥನ ಮಾಡಿದ್ದರು ಎಂದು ನಂಬಲಾಗಿದೆ. ಅಲ್ಲದೇ ಶ್ರೀಕೃಷ್ಣನನ್ನು ಕಂಸನಿಂದ ರಕ್ಷಿಸಲು ಅವರ ತಂದೆ ಮಳೆಯಲ್ಲಿ ಕರೆದೊಯ್ಯುವಾಗ ಆ ಮಳೆಹನಿ ಮಗುವಾಗಿದ್ದ ಶ್ರೀಕೃಷ್ಣನ ಮೇಲೆ ಬೀಳದಂತೆ ಕಾಪಾಡಿದ್ದು ಕೂಡ ಇದೇ ವಾಸುಕಿ ನಾಗ. ಇದು ಕೇವಲ ಪುರಣಾದ ಕಥೆಯಲ್ಲಿ ನಿಜಕ್ಕೂ ವಾಸುಕಿ ಸರ್ಪ ಇತ್ತು ಅನ್ನೋದಕ್ಕೆ ಸಂಬಂಧಿಸಿದಂತೆ ಪುರಾವೆ ಸಿಕ್ಕಿದೆ.
ಈ ಬಗ್ಗೆ ದಿ ಹಿಂದೂ ವರದಿ ಮಾಡಿದೆ. ಸುಮಾರು 4.7 ಕೋಟಿ ವರ್ಷಗಳ ಹಿಂದೆ ಭಾರತದಲ್ಲಿ ಸಂಚರಿಸಿದ್ದ ಅತಿದೊಡ್ಡ ಹಾವಿನ ಪಳೆಯುಳಿಕೆಗಳನ್ನ ಸಂಶೋಧಕರು ಕಂಡು ಹಿಡಿದಿದ್ದಾರೆ. ಇಂಥದ್ದೊಂದು ದೈತ್ಯ ಹಾವಿನ ಕುರುಹು ಕಂಡು ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತಾಗಿದೆ.
‘ವಾಸುಕಿ’ಸರ್ಪದ ಪಳೆಯುಳಿಕೆ ಪತ್ತೆ
ಗುಜರಾತ್ನ ಕಚ್ನ ಕಲ್ಲಿದ್ದಲು ಗಣಿಯಲ್ಲಿ ಪಳೆಯುಳಿಕೆ ಪತ್ತೆಯಾಗಿದೆ.
ಕಲ್ಲಿದ್ದಲು ಗಣಿಯಲ್ಲಿ ಭಾರೀ ಗಾತ್ರದ 27 ಪಳೆಯುಳಿಕೆಗಳು ಪತ್ತೆಯಾಗಿದೆ. ಇದು. 2005ರಲ್ಲಿ ಪತ್ತೆಯಾಗಿದ್ದು, ಅಂದಿನಿಂದ ಈ ಬಗ್ಗೆ ಸಂಶೋಧನೆ ನಡೆಸಿದಾಗ ಮೊದಲಿಗೆ ಇದು ಮೊಸಳೆ ರೀತಿಯ ಜೀವಿ ಎಂದು ಸಂಶೋಧಕರು ಹೇಳಿದ್ದರು. ಆದರೆ ಇದೀಗ ಬೃಹತ್ ಹಾವಿನ ಪಳೆಯುಳಿಕೆ ಅನ್ನುವುದು ದೀರ್ಘಕಾಲದ ಸಂಶೋಧನೆಯಿಂದ ತಿಳಿದುಬಂದಿದೆ. ಈ ಹಾವು ಬರೋಬ್ಬರಿ 1,000 ಕೆಜಿ ತೂಕ ಇತ್ತು ಎಂದು ಅಂದಾಜು. ಸುಮಾರು 36ರಿಂದ 50 ಅಡಿ ಉದ್ದ ಇದ್ದಿರುವ ಬಗ್ಗೆ ಅಂದಾಜು.
ವಿಜ್ಞಾನಿಗಳ ಸಂಶೋಧನಾ ವರದಿಯಲ್ಲಿ ಈ ಬಗ್ಗೆ ಉಲ್ಲೇಖ. ರೂರ್ಕಿ ಐಐಟಿಯ ಪ್ರೊಫೆಸರ್ ದೇಬ್ಜಿತ್ ದತ್ತಾರಿಂದ ವರದಿ ಪ್ರಕಟವಾಗಿದ್ದು, ಈ ಬೃಹತ್ ಹಾವಿಗೆ ವಾಸುಕಿ ಇಂಡಿಕಸ್ ಎಂದು ನಾಮಕರಣ ಮಾಡಲಾಗಿದೆ.
ಇಡೀ ಜಗತ್ತಿನಲ್ಲಿ ವಾಸವಿದ್ದ ಅತಿದೊಡ್ಡ ಹಾವು ಇದಾಗಿದೆ.
ಕೊಲಂಬಿಯಾದಲ್ಲಿ 6 ಕೋಟಿ ವರ್ಷಗಳ ಹಿಂದೆ ಜೀವಿಸಿದ್ದ ಸುಮಾರು 43 ಅಡಿ ಉದ್ದದ ಟಿಟನೋಬೋವಾ ಎಂಬ ಹಾವು ಅತಿ ಉದ್ದದ ಹಾವು ಅಂತಾ ಗುರುತಿಸಲಾಗಿತ್ತು. ಇದೀಗ ವಾಸುಕಿ ಇಂಡಿಕಸ್, ಅತಿದೊಡ್ಡ ಹಾವಿನ ಜಾತಿ ಎನಿಸಿಕೊಂಡಿದೆ. ಈ ಬಗ್ಗೆ ಸಂಶೋಧನೆ ಮತ್ತಷ್ಟು ಮುಂದುವರಿದಿದೆ. ದೈತ್ಯ ಸರ್ಪದ ಬಗ್ಗೆ ಕುತೂಹಲವೂ ಹೆಚ್ಚಾಗಿದೆ.