ಭೂಮಿಯ ಮೇಲೆ ನಮಗೆ ಗೊತ್ತಿಲ್ಲದಂತಹ ಅನೇಕ ವಿಚಿತ್ರ ಮತ್ತು ವಿಶಿಷ್ಟ ಜೀವಿಗಳು ಅಡಗಿವೆ. ಆಗೊಮ್ಮೆ ಈಗೊಮ್ಮೆ ಕೆಲವು ಹೊಸ ಜಾತಿಯ ಪ್ರಾಣಿಗಳು ಕಣ್ಣಿಗೆ ಬೀಳುವ ಮೂಲಕ ಎಲ್ಲರನ್ನೂ ಅಚ್ಚರಿಗೆ ದೂಡುತ್ತವೆ. ಇಂತಹ ವಿಚಿತ್ರ ಜೀವಿಗಳ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇತ್ತೀಚಿಗೆ ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ಮೀನುಗಾರನಿಗೆ ವಿಚಿತ್ರ ಅನುಭವವಾಗಿದ್ದು, ನೀರಿನಿಂದ ದೋಣಿಯ ಮೇಲೇರಿದ ವಿಚಿತ್ರ ಪ್ರಾಣಿಯನ್ನು ನೋಡಿದ ಮೀನುಗಾರ ಒಂದು ಕ್ಷಣ ಆಶ್ಚರ್ಯಚಕಿತರಾದರು. ಅಷ್ಟಕ್ಕೂ ಆ ಪ್ರಾಣಿ ಯಾವುದು ಎಂಬುದನ್ನು ನಾವೀಗ ತಿಳಿಯೋಣ.


ವಿಡಿಯೋದಲ್ಲಿ ಏನಿದೆ?
ಮೀನುಗಾರ ದೋಣಿಯಲ್ಲಿ ಪ್ರಯಾಣಿಸುತ್ತಿರುತ್ತಾನೆ. ಈ ವೇಳೆ ನೀರಿನಲ್ಲಿ ಈಜುತ್ತಿರುವ ಪ್ರಾಣಿಯೊಂದು ದೋಣಿಯ ಹತ್ತಿರ ಬರುವುದನ್ನು ನೋಡಿ ನಿಲ್ಲಿಸುತ್ತಾನೆ. ದೋಣಿಯ ಹತ್ತಿರ ಬರುವ ಜೀವಿ ಅದರ ಮೇಲೆ ಏರುತ್ತದೆ. ಒಂದು ಕ್ಷಣ ಮೀನುಗಾರನನ್ನು ದಿಟ್ಟಿಸಿ ನೋಡುತ್ತದೆ. ಬಳಿಕ ಅಲ್ಲಿಂದ ತೆರಳಿ ದೋಣಿಯ ಮುಂಭಾಗದಲ್ಲಿ ಕುಳಿತುಕೊಳ್ಳುತ್ತಿದೆ. ಅಂತಿಮವಾಗಿ ದೋಣಿ ದಡಕ್ಕೆ ಬಂದಾಗ ಆ ಜೀವಿ ದೋಣಿಯಿಂದ ಇಳಿದು ಕಾಡಿನೊಳಗೆ ಹೋಗುತ್ತದೆ.
ದೋಣಿಯೊಳಗೆ ಏರಿದ ಜೀವಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅದು ಸ್ಪೈಡರ್ ಮಂಕಿ ಎಂದು ತಿಳಿದುಬಂದಿದೆ. ಈ ಸ್ಪೈಡರ್ ಕೋತಿಗಳು ಮುಖ್ಯವಾಗಿ ಮೆಕ್ಸಿಕೋ, ಬ್ರೆಜಿಲ್ ಹಾಗೂ ದಕ್ಷಿಣ ಅಮೆರಿಕಾದ ಕಾಡುಗಳಲ್ಲಿ ಕಂಡುಬರುತ್ತವೆ. ಉದ್ದವಾದ ಬಾಲ ಮತ್ತು ಕೈಕಾಲುಗಳಿಂದಾಗಿ ಈ ಮಂಗಗಳು ವಿಚಿತ್ರವಾಗಿ ಕಾಣುತ್ತವೆ. ಈ ಮಂಗಗಳು ಹಣ್ಣುಗಳನ್ನು ತಿಂದು ಬದುಕುತ್ತವೆ. ಮುಖ್ಯವಾಗಿ ಆರ್ದ್ರ ಕಾಡುಗಳಲ್ಲಿ ವಾಸಿಸುತ್ತವೆ.
ಸ್ಪೈಡರ್ ಕೋತಿಗಳಲ್ಲಿ ಹಲವು ಪ್ರಭೇದಗಳಿವೆ. ಆದರೆ, ಅವು ಪ್ರಸ್ತುತ ಅಳಿವಿನಂಚಿನಲ್ಲಿವೆ. ಇದೀಗ ಸ್ಪೈಡರ್ ಕೋತಿಯನ್ನು ನೋಡಿ ನೆಟ್ಟಿಗರು ಹುಬ್ಬೇರಿಸಿದ್ದು, ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.