Monday, October 14, 2024

ದಕ್ಷಿಣ ಕನ್ನಡ: ಕಡಿಮೆ ಅಂಕ ಕೊಟ್ಟ ಗುರುವಿಗೇ ವಿದ್ಯಾರ್ಥಿನಿಯ ತಿರುಮಂತ್ರ‌..! ನೀರಿನ ಬಾಟಲಿಗೆ ಮಾತ್ರೆ ಹಾಕಿದ್ರು.. ಶಿಕ್ಷಕಿಯರಿಬ್ಬರು ಅಸ್ವಸ್ಥ

ದಕ್ಷಿಣ ಕನ್ನಡ: ಶಾಲಾ ಪರೀಕ್ಷೆಯ ಗಣಿತ ವಿಷಯದಲ್ಲಿ ಕಡಿಮೆ ಅಂಕ ನೀಡಿದ್ದಾರೆ ಎಂಬ ದ್ವೇಷಕ್ಕೆ ಆರನೇ ತರಗತಿ ವಿದ್ಯಾರ್ಥಿನಿಯರಿಬ್ಬರು ಗಣಿತ ಶಿಕ್ಷಕಿಯ ನೀರಿನ ಬಾಟಲಿಗೆ ಅವಧಿ ಮುಗಿದ ಮಾತ್ರೆ ಹಾಕಿದ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ನಡೆದಿದೆ.

With Input from ವಿಸ್ತಾರ ನ್ಯೂಸ್

ಈ ಮಾತ್ರೆ ಬೆರೆತ ನೀರನ್ನು ಸೇವಿಸಿದ ಇಬ್ಬರು ಶಿಕ್ಷಕಿಯರು ಅಸ್ವಸ್ಥಗೊಂಡಿದ್ದಾರೆ.

ಉಳ್ಳಾಲದ ಖಾಸಗಿ ಶಾಲೆಯಲ್ಲಿ ಘಟನೆ ನಡೆದಿದೆ. ಇದೀಗ ಶಾಲೆಯ ಆಡಳಿತ ಮಂಡಳಿ ತುರ್ತು ಎಸ್ ಡಿಎಂಸಿ ಸಭೆ ನಡೆಸಿ ವಿದ್ಯಾರ್ಥಿನಿಯರಿಬ್ಬರಿಗೆ ಟಿ.ಸಿ ನೀಡಲು ನಿರ್ಧರಿಸಿದೆ ಎಂದು ವರದಿಯಾಗಿದೆ.

ಶಾಲೆಯಲ್ಲಿ ನಡೆಯುವ ಘಟಕ ಪರೀಕ್ಷೆಯ ಗಣಿತದಲ್ಲಿ ವಿದ್ಯಾರ್ಥಿನಿಗೆ ಕಡಿಮೆ ಅಂಕ ಬಂದಿತ್ತು. ಅಲ್ಲದೇ ಸರಿಯಿದ್ದ ಉತ್ತರಕ್ಕೆ ಶಿಕ್ಷಕಿ ತಪ್ಪು ಹಾಕಿದ್ದಾರೆ ಅನ್ನುವ ದ್ವೇಷವೂ ವಿದ್ಯಾರ್ಥಿನಿಯಲ್ಲಿ ಹುಟ್ಟಿತ್ತು. ತನ್ನ ಸ್ನೇಹಿತೆಯೊಬ್ಬಳ ಸಹಾಯ ಪಡೆದುಕೊಂಡ ವಿದ್ಯಾರ್ಥಿನಿ ಶಿಕ್ಷಕಿಯ ನೀರಿನ ಬಾಟಲಿಗೆ ಮಾತ್ರೆ ಹಾಕಲು ಪ್ಲ್ಯಾನ್‌ ಮಾಡಿದ್ದಳು. ಅದರಂತೆ ಎಲ್ಲಿಂದಲೋ ಅವಧಿ ಮುಗಿದ ಮಾತ್ರೆಗಳನ್ನು ತಂದು ನೀರಿನ ಬಾಟಲಿಗೆ ಬೆರೆಸಿದ್ದಾಳೆ.

ಸ್ಟಾಫ್ ರೂಮ್ ನಲ್ಲಿ ಶಿಕ್ಷಕಿಯರಿಲ್ಲದ ಸಂದರ್ಭ ನೋಡಿಕೊಂಡು ಇಬ್ಬರೂ ವಿದ್ಯಾರ್ಥಿನಿಯರು ಸೇರಿ ಗಣಿತ ಶಿಕ್ಷಕಿಗೆ ಸೇರಿದ ವಾಟರ್ ಬಾಟಲಿಗೆ ತಾವು ತಂದ ಮಾತ್ರೆಗಳನ್ನು ಹಾಕಿದ್ದಾರೆ. ಇದೇ ಬಾಟಲಿಯ ನೀರನ್ನು ಗಣಿತ ಶಿಕ್ಷಕಿ ಜತೆ ಇನ್ನೋರ್ವ ಶಿಕ್ಷಕಿಯೂ ಕುಡಿದು ಅಸ್ವಸ್ಥಗೊಂಡಿದ್ದಾರೆ.

ಇನ್ನೋರ್ವ ಶಿಕ್ಷಕಿಗೆ ಮುಖದಲ್ಲಿ ಊತ ಉಂಟಾಗಿದೆ. ನೀರಿನ ರುಚಿಯಲ್ಲಿ ಬದಲಾವಣೆ ಕಂಡುಬಂದು ಸೂಕ್ಷ್ಮವಾಗಿ ಗಮನಿಸಿದಾಗ ನೀರಲ್ಲಿ ಮಾತ್ರೆಗಳಿರುವುದು ಕಂಡುಬಂದಿದೆ. ಈ ಕುರಿತು ವಿಚಾರಿಸಿ ಸಿಸಿಟಿವಿ ಗಮನಿಸಿದಾಗ ವಿದ್ಯಾರ್ಥಿನಿಯರ ಕೃತ್ಯ ಬೆಳಕಿಗೆ ಬಂದಿದೆ.

ಶಾಲೆಯ ಆಡಳಿತ ಮಂಡಳಿ ಇದೀಗ ಕೃತ್ಯವೆಸಗಿದ ವಿದ್ಯಾರ್ಥಿನಿಯರನ್ನು ಟಿಸಿ ಕೊಟ್ಟು ಕಳುಹಿಸಿದೆ. ಆದರೆ, ಇಷ್ಟೇ ಸಾಲದು ಈ ಬಗ್ಗೆ ಪೊಲೀಸ್‌ ತನಿಖೆ ನಡೆಯಲಿ ಎಂದು ಕೆಲವು ಹೆತ್ತವರು ಒತ್ತಾಯಿಸಿದ್ದಾರೆ.

Related Articles

Latest Articles