ಯುಎಫ್ಒಗಳು ಅನ್ಯಗ್ರಹ ಜೀವಿಗಳ ವಾಹನ ಎಂದು ಹೇಳಲಾಗುತ್ತದೆ. ಇವುಗಳನ್ನು ಕಂಡಿದ್ದಾಗಿ ಆಗಾಗ ಕೆಲವರು ಹೇಳುತ್ತಿರುತ್ತಾರೆ. ಅದರಲ್ಲೂ ವಿದೇಶಗಳಲ್ಲಿ ಇದರ ಬಗ್ಗೆ ಹೆಚ್ಚು ಮಾತುಗಳು ಕೇಳಿಬರುತ್ತಿರುತ್ತವೆ.
ಆದರೆ ಈಗ ಭಾರತದಲ್ಲೂ ಇಂಥದ್ದೊಂದು ಮಾತು ಕೇಳಿಬಂದಿದೆ. ಮಣಿಪುರ ರಾಜಧಾನಿ ಇಂಫಾಲ್ನ ವಿಮಾನ ನಿಲ್ದಾಣದ ಬಳಿ ಭಾನುವಾರ ಯುಎಫ್ಒ ಪತ್ತೆಯಾಗಿರುವುದಾಗಿ ವರದಿಯಾಗಿದೆ.
ಯುಎಫ್ಒ ಪತ್ತೆಯಾದ ಬೆನಲ್ಲೇ ಎರಡು ರಫೇಲ್ ಜೆಟ್ಗಳನ್ನು ಹಸಿಮಾರಾ ವಾಯುನೆಲೆಯಿಂದ ಹಾರಿಸಲಾಯಿತು. ಆದರೆ, ಏನನ್ನೂ ಗುರುತಿಸಲಾಗಿಲ್ಲ ಎಂದು ಸೇನೆಯ ಉನ್ನತ ಮೂಲಗಳು ಮಾಧ್ಯಮಗಳಿಗೆ ಮಾಹಿತಿ ನೀಡಿವೆ.
ಯುಎಫ್ಒ ಹುಡುಕಿ ಹೊರಟ ಮೊದಲ ವಿಮಾನವು ತನ್ನ ನೆಲೆಗೆ ಮರಳಿದ ನಂತರ ಎರಡನೇ ಬಾರಿ ಪರಿಶೀಲಿಸುವ ಸಲುವಾಗಿ ಇನ್ನೊಂದು ವಿಮಾನವನ್ನು ಯುಎಫ್ಒ ಕಾಣಿಸಿಕೊಂಡ ಪ್ರದೇಶದ ಕಡೆಗೆ ಕಳುಹಿಸಲಾಗಿದೆ. ಆದರೆ, ಹತ್ತಿರದ ಪ್ರದೇಶಗಳಲ್ಲಿ ಅಂತಹ ಯಾವುದೇ ವಸ್ತು ಗುರುತಿಸಲಾಗಲಿಲ್ಲ ಎಂದು ತಿಳಿದುಬಂದಿದೆ.
ಈ ನಿಟ್ಟಿನಲ್ಲಿ, ಭಾರತೀಯ ವಾಯುಪಡೆಯ ಪೂರ್ವ ಕಮಾಂಡ್, ತನ್ನ ವಾಯು ರಕ್ಷಣಾ ಪ್ರತಿಕ್ರಿಯೆ ಕಾರ್ಯವಿಧಾನವನ್ನು ಇದೀಗ ಸಕ್ರಿಯಗೊಳಿಸಿರುವುದಾಗಿ ಹೇಳಿದೆ.
ಈ ಬಗ್ಗೆ ಪೂರ್ವ ಕಮಾಂಡ್ ತನ್ನ ಎಕ್ಸ್ ಖಾತೆಯಲ್ಲಿ ಪೊಸ್ಟ್ ಮಾಡಿದ್ದು, ಇಂಫಾಲ್ ವಿಮಾನ ನಿಲ್ದಾಣದ ಬಳಿ ಕಂಡುಬಂದು ದೃಶ್ಯ ರೂಪದ ಬಳಿಕ ಭಾರತೀಯ ವಾಯು ರಕ್ಷಣಾ ಪಡೆ ತನ್ನ ವಾಯು ರಕ್ಷಣಾ ಪ್ರತಿಕ್ರಿಯೆ ಕಾರ್ಯವಿಧಾನ ಆ್ಯಕ್ಟಿವೇಟ್ ಮಾಡಿದೆ. ಪರಿಶೀಲನೆ ನಡೆಸಿದ ಬಳಿಕ ಯಾವುದೇ ಸಾಧನ ಕಂಡುಬಂದಿಲ್ಲ ಎಂದು ಹೇಳಿದೆ. ಯುಎಫ್ಒ ಬರೀ ಕಣ್ಣುಗಳಿಗೆ ಕಾಣಿಸಿಕೊಂಡಿತು. ವಿಮಾನ ನಿಲ್ದಾಣದ ಪಶ್ಚಿಮಕ್ಕೆ ಸಂಜೆ 4 ಗಂಟೆಯವರೆಗೂ ಚಲಿಸುತ್ತಿತ್ತು ಎಂದು ಸಿಐಎಸ್ಎಫ್ ತಿಳಿಸಿದೆ.
ಯುಎಫ್ಒ ಕಾಣಿಸಿಕೊಂಡ ಸುದ್ದಿ ಹರಡುತ್ತಿದ್ದಂತೆ ಇಂಫಾಲ್ನ ಬಿರ್ ಟಿಕೇಂದ್ರಜಿತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲಕಾಲ ವಿಮಾನ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು. ವಿಮಾನ ನಿಲ್ದಾಣ ಮೇಲೆಯೇ ಕಾಣಿಸಿಕೊಂಡಿದ್ದರಿಂದ ವಿಮಾನ ಹಾರಾಟಗಳನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ.
ಕೋಲ್ಕತ್ತಾದಿಂದ ಆಗಮಿಸುತ್ತಿದ್ದ ಇಂಡಿಗೋ ವಿಮಾನ ಒಳಗೊಂಡಂತೆ ಕೆಲ ವಿಮಾನಗಳ ಮಾರ್ಗವನ್ನು ಬದಲಿಸಲಾಯಿತು. ಇಂಡಿಗೂ ವಿಮಾನವನ್ನು 25 ನಿಮಿಷಗಳ ನಂತರ ಗುವಾಹಟಿಗೆ ತಿರುಗಿಸಲಾಯಿತು. ಸುಮಾರು ಮೂರು ಗಂಟೆಗಳ ನಂತರ ಕ್ಲಿಯರೆನ್ಸ್ ಪಡೆದ ಬಳಿಕ ಇಂಫಾಲ್ ವಿಮಾನ ನಿಲ್ದಾಣದಿಂದ ವಿಮಾನಗಳು ಹೊರಟವು. (ಏಜೆನ್ಸೀಸ್)