ತುಮಕೂರು: ಪ್ರೀತಿ ನಿರಾಕರಿಸಿದ ಮಂಗಳಮುಖಿಗೆ ಚಾಕು ಇರಿದು ಯುವಕ ಪರಾರಿಯಾಗಲು ಯತ್ನಿಸಿದಾಗ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕುಣಿಗಲ್ ಪಟ್ಟಣದ ಕೋಟೆಯಲ್ಲಿ ನಡೆದಿದೆ. ಹನೀಷಾ (21 ವರ್ಷ) ಎಂಬ ಮಂಗಳಮುಖಿಗೆ ಮಂಡ್ಯದ ಆದಿಲ್ (೨೩ವ) ಎಂಬ ವರ್ಷದ ಯುವಕ ಚಾಕುವಿನಿಂದ ಇರಿದಿದ್ದಾನೆ.
ಹನೀಷಾ ಹಾಗೂ ಆದಿಲ್ ಕಳೆದ ಆರು ತಿಂಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಲಿಂಗತ್ವ ಅಲ್ಪಸಂಖ್ಯಾತರ ಕಾರ್ಯಕ್ರಮಗಳ ನಿಮಿತ್ತ ಹನೀಷಾ ಆಗಾಗ ಬೇರೆ ಬೇರೆ ಊರುಗಳಿಗೆ ಹೋಗುತ್ತಿದ್ದಳು. ಇದನ್ನು ಸಹಿಸದ ಆದಿಲ್, ಆಕ್ಷೇಪ ವ್ಯಕ್ತಪಡಿಸಿ ಹಲ್ಲೆ ನಡೆಸುತ್ತಿದ್ದ.
ಇದರಿಂದ ಬೇಸತ್ತು ಪ್ರೇಮ ನಿರಾಕರಿಸಿದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಸಂದರ್ಭದಲ್ಲಿ ಆದಿಲ್ ಚಾಕುವಿನಿಂದ ಇರಿದಿದ್ದಾನೆ. ಇನ್ನು ಗಾಯಾಳು ಹನೀಷಾಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.