ಮಂಗಳೂರು: ಈಜುಕೊಳದಲ್ಲಿ ಮುಳುಗಿ ಮೈಸೂರಿನ ಮೂವರು ಯುವತಿಯರು ಸಾವನ್ನಪ್ಪಿದ್ದಾರೆ. ನಗರದ ಹೊರವಲಯದ ಉಚ್ಚಿಲ ಸಮುದ್ರತಡಿಯ ಖಾಸಗಿ ಬೀಚ್ ರೆಸಾರ್ಟ್‌ನಲ್ಲಿ ಈ ಘಟನೆ ನಡೆದಿದೆ.
ಮೈಸೂರಿನ ಕುರುಬರಹಳ್ಳಿ ನಾಲ್ಕನೇ ಕ್ರಾಸ್ ನ ನಿಶಿತ ಎಂ.ಡಿ. (21), ರಾಮಾನುಜ ರಸ್ತೆಯ, ಕೆ.ಆರ್ ಮೊಹಲ್ಲಾದ ಪಾರ್ವತಿ ಎಸ್ (20), ವಿಜಯನಗರ ದೇವರಾಜ ಮೊಹಲ್ಲಾದ ಕೀರ್ತನ ಎನ್(21) ಮೃತರು.
ಮೈಸೂರು ಮೂಲದ ಯುವತಿಯರು ಉಚ್ಚಿಲ ಬೀಚ್ ಬಳಿಯ ರೆಸಾರ್ಟ್‌ನ ಸ್ವಿಮ್ಮಿಂಗ್ ಫೂಲ್‌ನಲ್ಲಿ ಈಜಾಡುವಾಗ ಏಕಾಏಕಿ ಮುಳುಗಿ ಮೃತಪಟ್ಟಿದ್ದಾರೆ.
ಯುವತಿಯರು ನ. 16 ರ ಬೆಳಗ್ಗೆ ಬೀಚ್ ರೆಸಾರ್ಟ್‌ಗೆ ಆಗಮಿಸಿ ಕೊಠಡಿ ಪಡೆದಿದ್ದು, ಭಾನುವಾರ ಬೆಳಿಗ್ಗೆ 8.30ರ ಸುಮಾರಿಗೆ ಈಜುಕೊಳದಲ್ಲಿ ಆಟವಾಡುತ್ತಿದ್ದ ವೇಳೆ ಮೃತಪಟ್ಟಿದ್ದಾರೆ.
ಈಜುಕೊಳದಲ್ಲಿ ಒಂದು ಬದಿ ಆರು ಅಡಿಯಷ್ಟು ಆಳವಿತದ್ದು, ಈ ವೇಳೆ ಆಯಾತಪ್ಪಿ ಓರ್ವ ಯುವತಿ ಮುಳುಗಿರುವ ಸಾಧ್ಯತೆ ಇದ್ದು, ಆಕೆಯ ರಕ್ಷಣೆಗೆ ತೆರಳಿದ ಉಳಿದ ಇಬ್ಬರೂ ಮುಳುಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಉಳ್ಳಾಲ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಯುವತಿಯರು ಬೀಚ್ ಪ್ರವಾಸಕ್ಕೆಂದು ಮೈಸೂರಿನಿಂದ ಉಳ್ಳಾಲಕ್ಕೆ ಶನಿವಾರ ಆಗಮಿಸಿದ್ದು, ರೆಸಾರ್ಟ್‌ನಲ್ಲಿ ತಂಗಿದ್ದರು. ಭಾನುವಾರ ಬೆಳಿಗ್ಗೆ ಮೂವರೂ ಈಜುಕೊಳಕ್ಕೆ ಇಳಿದಿದ್ದಾರೆ. ಇದರ ವಿಡಿಯೋ ಸೆರೆ ಹಿಡಿಯಲು ತಮ್ಮ ಮೊಬೈಲ್ ಅನ್ನು ರೆಕಾರ್ಡ್ ಮೋಡ್‌ನಲ್ಲಿಟ್ಟಿದ್ದರು.
ಮೂವರು ಯುವತಿಯರು ಕೊಳಕ್ಕೆ ಇಳಿಯುತ್ತಾರೆ. ಒಬ್ಬಾಕೆ ಟ್ಯೂಬ್ ತೆಗೆದುಕೊಳ್ಳಲು ಸ್ವಲ್ಪ ಮುಂದಕ್ಕೆ ತೆರಳಿದ್ದು, ಈ ವೇಳೆ ನೀರಿನಲ್ಲಿ ದಿಢೀರ್ ಒದ್ದಾಡಿದ್ದಾಳೆ. ಈ ವೇಳೆ ರಕ್ಷಿಸಲು ಮತ್ತೊಬ್ಬಾಕೆ ಮುಂದೆ ಹೋಗಿ ಹಿಡಿಯುತ್ತಿದ್ದಂತೆ ಆಕೆಯೂ ನೀರಿನಿಂದ ಮೇಲೆ ಬರಲಾರದೇ ಒದ್ದಾಡಿದ್ದಾಳೆ. ಈ ವೇಳೆ ಮೂರನೇ ಯುವತಿ ಕೂಡ ಅವರಿಬ್ಬರ ರಕ್ಷಣೆಗೆ ತೆರಳಿದ್ದು ಆಕೆಯೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ. ಯುವತಿಯರು ಈಜುಕೊಳದಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ವಿಡಿಯೋ ರೆಸಾರ್ಟ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ