ಲಂಡನ್: ಗಾಝಾದಲ್ಲಿ ತಕ್ಷಣ ಕದನವಿರಾಮ ಏರ್ಪಡಬೇಕೆಂದು ಆಗ್ರಹಿಸುವ ಮೂಲಕ ಬ್ರಿಟನ್ ಸರಕಾರದ ನಿಲುವನ್ನು ವಿರೋಧಿಸಿದ ಆಡಳಿತ ಪಕ್ಷದ ಸಂಸದ ಪೌಲ್ ಬ್ರಿಸ್ಟೋವ್ರನ್ನು ಸಂಸದೀಯ ಸಮಿತಿಯಿಂದ ವಜಾಗೊಳಿಸಲಾಗಿದೆ ಎಂದು `ದಿ ಟೆಲಿಗ್ರಾಫ್’ ವರದಿ ಮಾಡಿದೆ.
ಇಸ್ರೇಲ್-ಹಮಾಸ್ ನಡುವಿನ ಯುದ್ಧ ಶಾಶ್ವತವಾಗಿ ಸ್ಥಗಿತಗೊಳ್ಳುವ ಪ್ರಯತ್ನವನ್ನು ಪ್ರಧಾನಿ ರಿಷಿ ಸುನಕ್ ಬೆಂಬಲಿಸಬೇಕೆಂದು ಆಗ್ರಹಿಸಿ ಬ್ರಿಸ್ಟೋವ್ ಸರಕಾರಕ್ಕೆ ಪತ್ರ ಬರೆದಿದ್ದರು.
ಸರಕಾರದ ನಿಲುವಿಗಿಂತ ವಿಭಿನ್ನ ನಿಲುವು ತಳೆದಿರುವ ಹಿನ್ನೆಲೆಯಲ್ಲಿ ವಿಜ್ಞಾನ, ನಾವೀನ್ಯತೆ ಮತ್ತು ತಂತ್ರಜ್ಞಾನ ಇಲಾಖೆಯ ಸಂಸದೀಯ ಕಾರ್ಯದರ್ಶಿ ಹುದ್ದೆಯಿಂದ ಬ್ರಿಸ್ಟೋವ್ರನ್ನು ವಜಾಗೊಳಿಸಿರುವುದಾಗಿ ವರದಿಯಾಗಿದೆ. ಇಸ್ರೇಲ್ ಗೆ ಸ್ವರಕ್ಷಣೆಯ ಹಕ್ಕು ಇದೆ ಎಂದು ಹೇಳಿರುವ ಬ್ರಿಟನ್ ಸರಕಾರ, ಗಾಝಾಕ್ಕೆ ಮಾನವೀಯ ನೆರವು ಪೂರೈಕೆಯಾಗಬೇಕು ಎಂದು ಒತ್ತಾಯಿಸಿದೆ. ಆದರೆ ಕದನ ವಿರಾಮಕ್ಕೆ ಬೆಂಬಲ ಘೋಷಿಸಿಲ್ಲ.